ಉಪಭಾಷೆ / ಆಡುಭಾಷೆ ( Dialect )
ಉಪಭಾಷೆ / ಆಡುಭಾಷೆ ( Dialect ) : ಸಮಾಜ ಜೀವಿಯಾದ ಮಾನವನು ತನ್ನ ಸಾಮಾಜಿಕ ಜೀವನದಲ್ಲಿ ಸಂಪರ್ಕ ಸಾಧನವಾಗಿ ಕಂಡುಕೊಂಡ ವಿಶಿಷ್ಟವಾದ ಮಾಧ್ಯಮ ಭಾಷೆ. ಈ ಭಾಷೆ ಮಾನವನ ಜನಾಂಗದ ಅತ್ಯಮೂಲ್ಯವಾದ ಆಸ್ತಿ. ಮಾನವ ಸಮಾಜದಲ್ಲಿ ವ್ಯಾವಹಾರಿಕ ಮಾಧ್ಯಮ ವಾಗಿ ಸಂಭಾಷಣೆಯಲ್ಲಿ ಬಳಕೆಯಾಗುತ್ತ ಬಂದ ಭಾಷೆ ನಿತ್ಯ ಪರಿವರ್ತನಾ ಶೀಲವಾದುದು. ಇದು ನಿಂತ ನೀರಿನಂತಲ್ಲ. ವ್ಯಾವಹಾರಿಕವಾಗಿ ಬಳಕೆಯಾಗುತ್ತ ಆಗುತ್ತ ಭಾಷೆ ಕಾಲದಿಂದ ಕಾಲಕ್ಕೆ, ಜನಾಂಗದಿಂದ ಜನಾಂಗಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತ ಸಾಗುತ್ತದೆ. ಹೀಗೆ ಬದಲಾಗುತ್ತ ಸಾಗಿದಂತೆ ಒಂದು ಮೂಲ ಭಾಷೆಯಲ್ಲಿ ಪ್ರಭೇದಗಳು ಹುಟ್ಟಿಕೊಳ್ಳುತ್ತವೆ. ಈ ಪ್ರಭೇದ ಉಪಭಾಷೆ ಅಥವಾ ಆಡುಭಾಷೆ ಎನಿಸಿಕೊಳ್ಳುತ್ತದೆ. ಒಂದು ಮೂಲ ಭಾಷೆಯಿಂದ ಅಥವಾ ಪ್ರಚಲಿತದಲ್ಲಿರುವ ಒಂದು ಭಾಷೆಯಿಂದ ಹುಟ್ಟಿಕೊಳ್ಳುವ ಅಥವಾ ಬದಲಾದ ರೂಪದಲ್ಲಿ ಕಂಡುಬರುವ ಪ್ರಭೇದ ಆ ಭಾಷೆಯ ಉಪಭಾಷೆ ಎಂದು ಕರೆಯಲ್ಪಡುತ್ತದೆ.
ಒಂದು ಪ್ರದೇಶದಲ್ಲಿ ಒಂದು ಅಧಿಕೃತವಾದ ಪ್ರಾದೇಶಿಕ ಭಾಷೆ ಇರುತ್ತದೆ. ಆದರೆ ಆ ಪ್ರದೇಶದ ಎಲ್ಲಾ ಜನರಾಡುವ ಭಾಷಾ ರೂಪುಗಳು ಒಂದೇ ಆಗಿರುವುದಿಲ್ಲ. ಆ ಪ್ರಾದೇಶಿಕ ಭಾಷೆಯ ವಿವಿಧ ರೂಪಗಳು ಆ ಪ್ರದೇಶದಲ್ಲಿ ಕಂಡು ಬರುತ್ತವೆ, ಮತ್ತು ಪ್ರದೇಶದಲ್ಲಿಯ ವಿವಿಧ ಭಾಗಗಳ, ವಿವಿಧ ಗಂಪುಗಳ ಜನರ ಭಾಷೆಗಳಲ್ಲಿ ಶಬ್ದ ವ್ಯತ್ಯಾಸಗಳು, ಉಚ್ಚಾರ ಕ್ರಮದಲ್ಲಿ ವ್ಯತ್ಯಾಸಗಳು, ವಾಕ್ಯ ರಚನೆಯಲ್ಲಿ ವ್ಯತ್ಯಾಸಗಳು, ಶಬ್ದಗಳಲ್ಲಿ ಅರ್ಥ ವ್ಯತ್ಯಾಸಗಳು ಇರುವುದು ಕಂಡುಬರುತ್ತದೆ. ಈ ರೀತಿಯಲ್ಲಿ ಒಂದೇ ಪ್ರದೇಶಕ್ಕೆ ಸೇರಿದ ಜನರ ಅದೇ ಭಾಷೆಯಲ್ಲಿ ಕಂಡುಬರುವ ಭಾಷಾ ವೈವಿಧ್ಯಗಳೇ ಆ ಭಾಷೆಯ ಉಪಭಾಷೆಗಳಾಗುತ್ತವೆ.
ಈ ಉಪಭಾಷೆಯ ಕುರಿತು ವಿವರವಾಗಿ ವಿಶ್ಲೇಷಿಸೋಣ.
ನಮ್ಮೆದುರಿನಲ್ಲಿ ನಡೆಯುತ್ತಿರುವ ಸಂಭಾಷಣೆಯೊಂದು ನಮ್ಮದೇ ಭಾಷೆಯ ಇದೆ ಹಾಗೂ ಅದು ದಿನನಿತ್ಯದ ಸಾಮಾನ್ಯ ವಿಷಯವನ್ನೇ ಕುರಿತು ನಡೆಯುತ್ತಿದೆ ಎಂದುಕೊಳ್ಳೋಣ. ಹೀಗಿದ್ದರೂ ಈ ಸಂಭಾಷಣೆಯ ಎಲ್ಲ ವಿವರಗಳೂ, ವಾಕ್ಯವಾಕ್ಯ ವಾಗಿ ನಮಗೆ ಅರ್ಥವಾಗದೇ ಇರಬಹುದು; ಅರ್ಥೆಸಲು ಪ್ರಯಾಸ ಪಡಬೇಕಾಗ ಬಹುದು; ಅಥವಾ ಸುಲಭವಾಗಿ ಅರ್ಥವಾಗುವಂತಿರಲೂಬಹುದು. ಸುಲಭವಾಗಿ ಅರ್ಥವಾಗುವಂತಿದ್ದರೆ ಅದಕ್ಕೆ ಕಾರಣ ಸಂಭಾಷಣೆಯ ಭಾಷೆ, ಅದರ ಶಬ್ದಗಳ, ಉಚ್ಚಾರಣೆಯ ರೀತಿ, ವ್ಯಾಕರಣ ಎಲ್ಲವೂ ನಮ್ಮ ಮಾತಿನಲ್ಲಿರುವಂತೆಯೇ ಇದೆ ಎಂಬುದೇ. ಸುಲಭವಾಗಿ ಅರ್ಥವಾಗದಂತೆ ಇದ್ದರೆ ಸಂಭಾಷಣೆಯ ಭಾಷೆ ನಮ್ಮ ಭಾಷೆಯೇ ಆಗಿದ್ದರೂ ನಮ್ಮ ಮಾತುಗಳಿಗಿಂತ ಬೇರೆ ರೀತಿಯಲ್ಲಿರುವುದೇ ಇದಕ್ಕೆ ಕಾರಣ. ಎಂದರೆ ಸಂಭಾಷಣೆಯ ಭಾಷೆ ಹಾಗೂ ನಮ್ಮ ಮಾತುಕತೆಯ ಭಾಷೆ ಇವೆರಡೂ ಒಂದೇ ಭಾಷೆ ಎಂದು ಸ್ಕೂಲವಾಗಿ ಹೇಳಬಹುದಾದರೂ ನಿಜವಾಗಿ ಅದರ ಎರಡು ಬೇರೆ ಬೇರೆ ರೂಪಗಳು ಅಥವಾ ಪ್ರಭೇದಗಳ.
ಒಂದೇ ಭಾಷೆಯ ಇಂತಹ ಎರಡು ಪ್ರಭೇದಗಳ ನಡುವೆ ಹಲ ಕೆಲವು ಶಬ್ದವ್ಯತ್ಯಾಸಗಳು ಮಾತ್ರವೇ ಇರಬಹುದು. ಉದಾಹರಣೆಗೆ, ಬೆಂಗಳೂರು ಹಾಗೂ ಮೈಸೂರು ಸುತ್ತಮುತ್ತಲಿನ ಕನ್ನಡದ ಪ್ರಭೇದಗಳ ನಡುವೆ ಶಬ್ದ ಸಂಬಂಧವಾದ ಅನೇಕ ವ್ಯತ್ಯಾಸಗಳಿವೆ ; ಇತರ ಅಲ್ಪಸ್ವಲ್ಪ ವ್ಯತ್ಯಾಸಗಳೂ ಇವೆ. ಇದರಿಂದಾಗಿ ಪರಸ್ಪರ ಸಂಭಾಷಣೆ ನಡೆಸುವಲ್ಲಿ ಅಥವಾ ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ತೊಂದರೆಯೇನೂ ಆಗದು. ಬಳಸುವ ಕನ್ನಡವನ್ನು ಕೇಳಿ ಇವರು ಮೈಸೂರು ಕಡೆಯವರು ಅಥವಾ ಇವರು ಬೆಂಗಳೂರಿನವರು ಎಂದು ಗುರುತಿಸಲು ಸಾಧ್ಯವಾಗದು . ಆದರೆ ಒಂದೇ ಭಾಷೆಯ ಎರಡು ಪ್ರಭೇದಗಳ ನಡುವೆ ಶಬ್ದಗಳು , ಪ್ರತ್ಯಯಗಳು, ವ್ಯಾಕರಣ ಹಾಗೂ ಉಚ್ಚಾರ ಣೆಯ ರೀತಿ ಈ ಮುಂತಾದವುಗಳಿಗೆ ಸಂಬಂಧಿಸಿದ ವ್ಯತ್ಯಾಸಗಳಿದ್ದರೆ ಆಗ ಈ ಎರಡೂ ಪ್ರಭೇದಗಳಿಗೆ ಸೇರಿದ ವ್ಯಕ್ತಿಗಳ ನಡುವೆ ಲೀಲಾಜಾಲವಾಗಿ ಸಂಭಾಷಣೆ ನಡೆಯುವು ದಾಗಲೀ ಪರಸ್ಪರರ ಮಾತುಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವುದಾಗಲೀ ಸಾಧ್ಯ ವಾಗದು. ಹೀಗೆ ಗಮನಾರ್ಹ ವ್ಯತ್ಯಾಸಗಳುಳ್ಳ ಒಂದೇ ಭಾಷೆಯ ಪ್ರಭೇದಗಳನ್ನು ಆ ಭಾಷೆಯ ಉಪಭಾಷೆಗಳು ಎಂದು ಕರೆಯಲಾಗುತ್ತದೆ .
ಉದಾಹರಣೆಗೆ, ಕನ್ನಡ ಭಾಷೆಯೆಂಬುದು ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಬಳಕೆಯಲ್ಲಿದ್ದರೂ , ಕನ್ನಡ ಭಾಷೆ ಎಂಬ ಹೆಸರಿನಿಂದಲೇ ಪರಿಚಿತವಾಗಿದ್ದರೂ ಬೆಂಗಳೂರು, ಧಾರವಾಡ, ಮಂಗಳೂರು, ಕಲಬುರಗಿ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಸಾಮಾನ್ಯರ ಕನ್ನಡದ ರೀತಿ ಅಥವಾ ಪ್ರಭೇದಗಳು ಒಂದರಿಂದ ಇನ್ನೊಂದು ಸಾಕಷ್ಟು ವ್ಯತ್ಯಾಸ / ಭಿನ್ನವಾಗಿವೆ. –
ಅದೇ ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇರೆ ಬೇರೆ ಸಮುದಾಯಗಳಲ್ಲಿ ಕೊಂಕಣಿ ಕನ್ನಡದ ರೀತಿ ಭಿನ್ನವಾಗಿದೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕನ್ನಡದ ಕೊಂಕಣಿ ಭಾಷೆಗಳಲ್ಲಿ ವ್ಯತ್ಯಾಸಗಳಿವೆ. ಹಾಗೂ F
ಕನ್ನಡ ಉಪಭಾಷೆಗಳ ಉದಾಹರಣೆ ಕೊಡುವುದಾದಲ್ಲಿ ಬೆಂಗಳೂರು ಪ್ರದೇಶದ ಕಡಲೇಕಾಯಿ/ಕಳ್ಳೆಕಾಯಿ, ನೇರವಾಗಿ, ಮಕ, ಬೇಗ, ಬಟ್ಟೆ ಮುಂತಾದ ಶಬ್ದಗಳ ಬದಲಾಗಿ ಧಾರವಾಡ ಪ್ರದೇಶದಲ್ಲಿ ಸೇಂಗಾ, ಸೀದಾ, ಮಾರಿ, ಲಗು, ಆರಿ: ಮುಂತಾದ ಶಬ್ದಗಳಿವೆ. ಬೆಂಗಳೂರಿನ ಆನೆ, ಒಂಟಿ, ಕತ್ತೆ ಮುಂತಾದ ಉಕಾರಾಂತ ನಾಮಪದಗಳಿಗೆ ಸಂವಾದಿಯಾಗಿ ಧಾರವಾಡ ಕನ್ನಡದಲ್ಲಿ -ಆನಿ, ಒಂಟಿ, ಕತ್ತಿ ಎಂಬ ಇಕಾರಾಂತ ನಾಮಪದಗಳಿವೆ. ಬೆಂಗಳೂರಿನ ಶಾಲೇಲಿ, ಮನೇಲಿ ಎಂಬ ರೂಪಗಳಿಗೆ ಧಾರವಾಡದಲ್ಲಿ ಶಾಲ್ಯಾಗ, ಮನ್ಯಾಗ ಎಂಬ ರೂಪಗಳಿವೆ.
ಕೊಂಕಣಿ ಭಾಷೆಯ ಉದಾಹರಣೆ ಕೊಡುವುದಾದಲ್ಲಿ ಮಂಗಳೂರು ಪ್ರದೇಶದಲ್ಲಿ - ಬಾಮ್ಮಣು, ಚಮ್ಮಲೊ, ಕಾಜಾರ ಈ ಪದಗಳು ಉತ್ತರ ಕನ್ನಡದ ಕೊಂಕಣಿಯಲ್ಲಿ ಘೋವು, ಗೆಲೊ, ಲಗ್ನ ಎಂಬುದಾಗಿ ಬಳಸಲಾಗುತ್ತವೆ. ಅಲ್ಲದೇ ಆಯಾ ಜಿಲ್ಲೆಗಳಲ್ಲಿಯೇ ಮತ್ತೆ ಸಮುದಾಯಗಳಿಗೆ ಅನುಗುಣವಾಗಿ ಬೇರೆ ಬೇರೆ ರೀತಿಯ ಕೊಂಕಣಿ ಉಪಭಾಷೆಗಳು ಕಂಡು ಬರುತ್ತವೆ.
ಹೀಗೆ ಸಾಮಾನ್ಯವಾಗಿ ಎಲ್ಲ ಭಾಷೆಗಳೂ ತಮ್ಮದೇ ಆದ ಭಾಷಾ ಪ್ರಭೇದಗಳನ್ನು ಅಂದರೆ ಉಪಭಾಷೆಗಳನ್ನು ಹೊಂದಿರುವುದು ಕಂಡು ಬರುತ್ತದೆ.
ಈ ಉಪಭಾಷೆಗಳು ರೂಪುಗೊಳ್ಳಲು ಕಾರಣವೆಂದರೆ ಆಯಾ ಪ್ರದೇಶದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಭೌಗೋಳಿಕ ಸ್ವರೂಪ, ಭೌಗೋಳಿಕವಾಗಿ ಪ್ರತಿ 40 45 ಕಿ.ಮೀ.ಗೆ ಒಂದೇ ಭಾಷೆ ಬದಲಾವಣೆಯಾಗಿರುತ್ತದೆ ಎಂಬುದಾಗಿ ಭಾಷಾ ತಜ್ಞರು ಗುರುತಿಸಿದ್ದಾರೆ. ಒಂದೇ ಭಾಷೆಯ ಜನರು ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದು ಅವರಾಡುವ ಉಪಭಾಷೆಗಳನ್ನು ಸಾಮಾಜಿಕ ಉಪಭಾಷೆಗಳೆಂದು ಕರೆಯುತ್ತಾರೆ. (ಮುಂದೆ ಈ ಕುರಿತು ಪ್ರತಿಪಾದಿಸಲಾಗಿದೆ).
ಅನ್ಯ ಭಾಷೆಗಳ ಪ್ರಭಾವದಿಂದಲೂ, ಉಪಭಾಷೆಗಳು ರೂಪಿತವಾಗುತ್ತವೆ. ಕರ್ನಾಟಕದಲ್ಲಿ ತೆಲಗು, ತಮಿಳು, ಮಲಯಾಳಂ, ಮರಾಠಿ, ಉರ್ದು ಭಾಷೆಗಳ ಪ್ರಭಾವದಿಂದ ಉರ್ದು ಕನ್ನಡ, ಮರಾಠಿ ಕನ್ನಡದಂತಹ ಉಪಭಾಷೆಗಳು ರೂಪುಗೊಂಡಿವೆ.
ಈ ರೀತಿಯಲ್ಲಿ ಒಂದು ಭಾಷೆಯು ಸಾಮಾಜಿಕವಾಗಿ, ಭೌಗೋಳಿಕವಾಗಿ, ಅನ್ಯಭಾಷಾ ಪ್ರಭಾವದಿಂದಾಗಿ, ವೃತ್ತಿಯಾಧಾರಿತವಾಗಿ ರೂಪಾಂತರಗೊಳ್ಳುತ್ತಾ ಉಪ್ಪಭಾಷೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಒಂದು ಪ್ರದೇಶದ ಜನರಾಡುವ ಭಾಷೆಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತಾ ಹೋದರೆ ಊರಿಗೊಂದು, ಜಾತಿಗೊಂದು ಭಾಷೆಗಳು ಗೋಚರವಾಗುತ್ತವೆ.
ಮಾನವ ಸಂವೇದನೆಯ ಅಭಿವ್ಯಕ್ತಿಗೆ ಸಮರ್ಥ ಮಾಧ್ಯಮವಾದ ಭಾಷೆ ಮಾನವ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ವ್ಯಕ್ತಿಗೆ, ಸಮಾಜಕ್ಕೆ ಬದಲಾವಣೆ, ಬೆಳವಣಿಗೆಗಳಿದ್ದಂತೆ ಭಾಷೆಗೂ ಇರುತ್ತದೆ. ಮಾನವನ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿಗಳು ಬದಲಾದಂತೆಯೂ ಭಾಷೆ ಬದಲಾಗುತ್ತದೆ. ಜೀವನಕ್ರಮಕ್ಕನುಸಾರವಾಗಿಯೂ ಭಾಷೆಯಲ್ಲಿ ಭಿನ್ನತೆಗಳು ಕಂಡು ಬರುತ್ತವೆ. ಒಂದು ಭಾಷೆಯ ಪ್ರದೇಶ ವಿಸ್ತಾರವಾದಷ್ಟೂ ಭಿನ್ನತೆಗಳು ಹೆಚ್ಚಾಗಿ ಕಾಣುತ್ತವೆ. ಈ ಭಿನ್ನತೆಗಳೇ ಈಮೇಲೆ ಹೇಳಿರುವ ಉಪಭಾಷೆಗಳ ಹುಟ್ಟಿಗೆ ಕಾರಣವಾಗುತ್ತವೆ,
ಭಾಷಾವಿಜ್ಞಾನದ ಪ್ರಮುಖ ಶಾಖೆಗಳಲ್ಲಿ ಉಪಭಾಷೆಗಳಿಗೆ ಸಂಬಂಧಿಸಿದ ಆಧ್ಯಯನವೂ ಒಂದು. ಇದನ್ನು ' ಲಿಂಗ್ವಿಸ್ಟಿಕ್ ಜಾಗ್ರಫಿ' ಅಥವಾ 'ಡಯಲೆಕ್ಟ್ರಾಲಾಜಿ' ಎಂದು ಕರೆಯಲಾಗಿದೆ.
ಉಪಭಾಷೆಗಳಲ್ಲಿ ಎರಡು ವಿಧಗಳನ್ನು ಕಾಣುತ್ತೇವೆ. ಪ್ರಾದೇಶಿಕ ಉಪಭಾಷೆ ಮತ್ತು ಸಾಮಾಜಿಕ ಉಪಭಾಷೆ.
ಅ ) ಪ್ರಾದೇಶಿಕ ಉಪಭಾಷೆಗಳು ( Regional Dialects ) ; ಈಗಾಗಲೇ ವಿವರಿಸಿದಂತೆ ಒಂದೇ ಪ್ರಾದೇಶಿಕ ಭಾಷೆ ಆಡುವ ಬೇರೆ ಬೇರೆ ಭಾಗಗಳಲ್ಲಿ ಭಾಷೆ ಒಂದೇ ರೀತಿ ಇರುವುದಿಲ್ಲ. ಅಂದರೆ ವಿವಿಧ ಭಾಗಗಳಲ್ಲಿ ಆ ಭಾಷೆಯ ಶಬ್ದಸ್ವರೂಪ, ಅರ್ಥಸ್ವರೂಪ, ಧ್ವನಿಯ ಏರಿಳಿತ ಇತ್ಯಾದಿಗಳಲ್ಲಿ ವ್ಯತ್ಯಾಸಗಳಿರುತ್ತವೆ. ಈ ರೀತಿಯಲ್ಲಿ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಕಾಣುವ ಭಾಷಾ ಪ್ರಭೇದಗಳೇ ಪ್ರಾದೇಶಿಕ ಉಪಭಾಷೆಗಳು. ಈ ರೀತಿ ಕಂಡು ಬರುವ ವ್ಯತ್ಯಾಸಕ್ಕೆ ಪ್ರಮುಖ ಕಾರಣ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವ ಸಾಮಾಜಿಕ, ಸಾಂಪ್ರದಾಯಿಕ, ಸಾಂಸ್ಕೃತಿಕ ಇತ್ಯಾದಿ ಸಂದರ್ಭಗಳ ಭಿನ್ನತೆಗಳು, ಈ ಮೇಲೆ ವಿವರಿಸಿದಂತೆ ಬೆಂಗಳೂರು, ಧಾರವಾಡ, ಕಲಬುರಗಿ, ಮಂಗಳೂರು (ದಕ್ಷಿಣ ಕನ್ನಡ), ಉತ್ತರ ಕನ್ನಡ ಪ್ರದೇಶಗಳಲ್ಲಿಯೂ ಕನ್ನಡದ ಪ್ರಭೇದಗಳು ಕನ್ನಡದ ಉಪಭಾಷೆಗಳು, ಇವುಗಳನ್ನು ಬೆಂಗಳೂರು ಕನ್ನಡ, ಧಾರವಾಡ ಕನ್ನಡ, ಕಲಬುರಗಿ ಕನ್ನಡ, ಮಂಗಳೂರು ಕನ್ನಡ, ಉತ್ತರಕನ್ನಡದ ಕನ್ನಡ ಹೀಗೆಯೇ ಕರೆಯಲಾಗುತ್ತದೆ. ಇಂಗ್ಲಿಷ್ ಭಾಷೆಯೂ ಪ್ರಪಂಚದಲ್ಲಿ ಅನೇಕ ಭಾಗಗಳಲ್ಲಿ ಬಳಕೆಯಲ್ಲಿದ್ದರೂ ಅದು ಎಲ್ಲ ದೇಶ, ಪ್ರದೇಶಗಳಲ್ಲಿಯೂ ಒಂದೇ ರೂಪದಲ್ಲಿ ಬಳಕೆಯಲ್ಲಿಲ್ಲ. ಅಮೆರಿಕಾದ ಇಂಗ್ಲಿಷ್, ಇಂಗ್ಲೆಂಡಿನ ಇಂಗ್ಲಿಷ್, ಭಾರತದ ಇಂಗ್ಲಿಷ್ ಈ ರೀತಿಯ ಪ್ರಭೇದಗಳಿವೆ . ಇವುಗಳಲ್ಲಿ ಶಬ್ದಗಳಲ್ಲಿ, ಉಚ್ಚಾರಣೆಯಲ್ಲಿ, ವ್ಯಾಕರಣದಲ್ಲಿ ವ್ಯತ್ಯಾಸವಾಗಿರುವುದು ಕಂಡು ಬರುತ್ತದೆ.
ಪ್ರಾದೇಶಿಕ ಉಪಭಾಷೆಗಳು ಒಂದೇ ಭಾಷೆಯ ಉಪಭಾಷೆಗಳಾಗಿದ್ದರೂ ಇವು ಒಬ್ಬರಿಂದ ಒಬ್ಬರಿಗೆ ಅರ್ಥವಾಗುತ್ತವೆಂದು ಹೇಳಲಾಗದು, ಬೆಂಗಳೂರು ಕನ್ನಡಿಗನಿಗೆ ಧಾರವಾಡ ಕನ್ನಡ ಕೇಳಿದಾಗ ಸಂಪೂರ್ಣ ಅರ್ಥವಾಗದಿರುವ ಸಾಧ್ಯತೆಗಳಿವೆ. ಅರ್ಥವಾಗಬೇಕಾದರೆ ಆಯಾ ಭಾಷೆ ತಿಳಿದಿರಬೇಕಾದುದು ಅಗತ್ಯವಾಗಿದೆ.ಒಂದು ಉಪಭಾಷೆ ಯಿಂದ ಇನ್ನೊಂದು ಉಪಭಾಷೆಯನ್ನು ಪ್ರತ್ಯೇಕಿಸಿ ಗುರುತಿಸಲು ಇದು ಆಧಾರವಾಗಬಲ್ಲದು. ಕೆಲವೊಮ್ಮೆ ಶಬ್ದಗಳಲ್ಲಿ ಅರ್ಥ ವ್ಯತ್ಯಾಸವಿದ್ದು ಉಪ ಭಾಷೆ ಅರಿತಿಲ್ಲದವನು ಅನರ್ಥ ಮಾಡಿಕೊಳ್ಳುವ ಸಂದರ್ಭಗಳೂ ಉಂಟಾಗುತ್ತವೆ. ಒಬ್ಬಾತ ಮಾತನಾಡುವಾಗ ಅವನ ಮಾತಿನಿಂದಲೇ ಆತನು ಯಾವ ಪ್ರದೇಶದವನೆಂದು ಸುಲಭವಾಗಿ ಗುರುತಿ ಬಹುದಾಗಿದೆ.
ಪ್ರಾದೇಶಿಕ ಉಪಭಾಷೆಗಳು ಉಂಟಾಗಲು ಕಾರಣಗಳು ( Reasons of formulation of Regional Dialects ) :
ಒಂದು ಪ್ರದೇಶವು ಸಾಕಷ್ಟು ವಿಸ್ತಾರವಾಗಿದ್ದು ಅಲ್ಲಿ ಒಂದು ಭಾಷೆ ಬಳಕೆ ಯಲ್ಲಿರುತ್ತದೆ. ಆ ಪ್ರದೇಶದ ಒಂದು ಭಾಗದ ಜನರಿಗೆ ಎಲ್ಲ ಭಾಗಗಳ ಜನರ ಸಂಪರ್ಕವಿರುವುದಿಲ್ಲ. ಇದು ಜೀವನದ ಅವಶ್ಯಕತೆಗಳನ್ನವಲಂಬಿಸಿರುತ್ತದೆ. ದೂರದ ಜನಸಾಮಾನ್ಯರೊಂದಿಗೆ ಸಂಪರ್ಕವಿರದಿದ್ದರೂ ಹತ್ತಿರದ ಊರುಗಳೊಂದಿಗೆ ದಿನನಿತ್ಯದ ವ್ಯವಹಾರಗಳಿಗೆ ಸಂಪರ್ಕಿಸುವ ಅನಿವಾರ್ಯತೆ ಇರುತ್ತದೆ. ಆದ್ದರಿಂದ ಜನರು ತಮ್ಮ ಪ್ರದೇಶದ ಸುತ್ತಮುತ್ತಲಿನ ಹಳ್ಳಿ ಪಟ್ಟಣಗಳೊಂದಿಗೆ ವ್ಯಾಪಾರ, ವ್ಯವಹಾರಗಳಿಗಾಗಿ ಸಂಪರ್ಕಿಸುತ್ತಿರುತ್ತಾರೆ. ಅಲ್ಲದೇ ಆಡಳಿತ, ಶಿಕ್ಷಣ ಮುಂತಾದ ಕಾರಣಗಳಿಗಾಗಿಯೂ ಸಂಪರ್ಕಿಸುತ್ತಾರೆ.ಇಲ್ಲಿ ಪಟ್ಟಣಗಳು ತಮ್ಮ ಸುತ್ತಲಿನ ಹಳ್ಳಿಗಳೊಂದಿಗೆ ಈ ರೀತಿಯ ಸಂಪರ್ಕವಿಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಸುತ್ತಲಿನ ಹಳ್ಳಿಗರ ಭಾಷೆ ಪರಸ್ಪರರಿಗೆ ಪರಿಚಿತವಾಗುತ್ತದೆ ; ವಿನಿಮಯಗೊಳ್ಳುತ್ತದೆ ; ಇದರಿಂದ ಹಳ್ಳಿ ಹಳ್ಳಿಗಳ ನಡುವಿರುವ ಭಾಷಿಕ ವ್ಯತ್ಯಾಸಗಳಲ್ಲಿ ಹಲವು ಅಳಿಸಿ ಹೋಗಿ ಸಮಾನತೆ ಹೆಚ್ಚುತ್ತದೆ. ಬಹುಮಟ್ಟಿಗೆ ಒಂದೇ ಬಗೆಯ ಭಾಷೆ ರೂಢಿಗೆ ಬರುತ್ತದೆ ಹೀಗೆ ಒಂದು ಭಾಷಾವಲಯ ಅಥವಾ ಭಾಷಾ ಪ್ರದೇಶ ರೂಪುಗೊಳ್ಳುತ್ತದೆ.
ಇಲ್ಲಿ ಗಮನಿಸತಕ್ಕ ಅಂಶವೆಂದರೆ ಈ ರೀತಿ ವ್ಯವಹಾರ ಸಂಪರ್ಕಗಳು ಹೆಚ್ಚಾಗಿರುವ ಭಾಷಾ ಪ್ರದೇಶದಲ್ಲಿ ಒಂದೇ ರೀತಿಯ ಭಾಷೆ ಚಾಲ್ತಿಯಲ್ಲಿ ಬಂದು ಅಲ್ಲಿಯದೇ ಒಂದು ಉಪಭಾಷೆ ರೂಪುಗೊಳ್ಳುತ್ತದೆ. ಹೀಗೆ ಒಂದು ಭಾಷೆಗೆ ಸೇರಿದ ವಿಸ್ತಾರವಾದ ಪ್ರದೇಶ ಪರಸ್ಪರ ಸಂಪರ್ಕಗಳು ಹೆಚ್ಚಾಗಿರುವ ಹಲವಾರು ಭಾಷಾ ಪ್ರದೇಶಗಳಾಗಿ ಒಡೆಯುತ್ತವೆ. ಉದಾ: ಒಂದು ಭಾಷೆಗೆ ಸೇರಿದ ವಿಸ್ತಾರವಾದ ಪ್ರದೇಶ ವಾದ ಕರ್ನಾಟಕದಲ್ಲಿ ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಕಲಬುರಗಿ ಕನ್ನಡ ಮುಂತಾದ ಕನ್ನಡಗಳು ಹುಟ್ಟಿಕೊಂಡಿರುವುದನ್ನು ಈಗಾಗಲೇ ವಿಶ್ಲೇಷಿಸಲಾಗಿದೆ.
ಒಂದು ಪ್ರದೇಶದಲ್ಲಿ ಭಾಷೆಯಲ್ಲಿ ವ್ಯತ್ಯಾಸವಿರುವಂತೆ ಆಚರಣೆಗಳು, ಪದ್ಧತಿ ಗಳು, ರೂಢಿಗಳು, ಜಾನಪದಕಲೆಗಳು, ಸಂಪ್ರದಾಯಗಳು ಮುಂತಾದವುಗಳಲ್ಲಿ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. ಅಂತೆಯೇ ಒಂದು ಪ್ರದೇಶದಲ್ಲಿಯ ಭಾಷಾ ರೂಢಿ, ವ್ಯತ್ಯಾಸಗಳು ಇನ್ನೊಂದು ಪ್ರದೇಶದಲ್ಲಿ ಬಳಕೆಗೆ ಬರುವುದಿಲ್ಲ. ಎರಡೂ ಪ್ರದೇಶದ ಗಡಿಯಲ್ಲಿರುವ ಜನರಿಗೆ ಮಾತ್ರ ಈ ಎರಡೂ ಭಾಷೆಗಳು ಪರಿಚಿತವಾಗಿರುತ್ತವೆ
ಇಂತಹ ಪ್ರಾದೇಶಿಕ ಉಪಭಾಷೆಗಳನ್ನು ರೂಪಿಸುವಲ್ಲಿ ಇನ್ನೊಂದು ಮುಖ್ಯ ಕಾರಣವೆಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ಕಡಿಯುವಂತೆ ಮಾಡುವ ನದಿ, ಬೆಟ್ಟ, ಕಣಿವೆ, ಘಟ್ಟ ಮುಂತಾದ ನೈಸರ್ಗಿಕ ತಡೆಗಳು ಇವುಗಳೆಲ್ಲ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಇರುವ ಸಂಪರ್ಕ, ವ್ಯವಹಾರವನ್ನು ಕಡಿತಗೊಳಿಸಿ ಇಲ್ಲವೇ ಕಡಿಮೆ ಮಾಡಿ ಇವೆರಡರ ಮಧ್ಯೆ ಭಾಷಾ ವ್ಯತ್ಯಾಸಗಳು ಹೆಚ್ಚಾಗುವಂತೆ ಮಾಡಿ ಪ್ರಾದೇಶಿಕ ಉಪಭಾಷೆ ರೂಪಾಂತಗೊಳ್ಳುವಲ್ಲಿ ಕಾರಣವಾಗುತ್ತವೆ,
ಆದರೆ ಇಂದಿನ ದಿನಗಳಲ್ಲಿ ಸಂಪರ್ಕ ಮಾಧ್ಯಮಗಳ ಮೂಲಕ ಪ್ರಾದೇಶಿಕ ಉಪಭಾಷೆಗಳು ಒಬ್ಬರಿಂದ ಒಬ್ಬರಿಗೆ ಅರ್ಥವಾಗುವಲ್ಲಿ ಸಹಾಯವಾಗುತ್ತದೆ.
ಬ ) ಸಾಮಾಜಿಕ ಉಪಭಾಷೆಗಳು ( Social Dialects ) : ಒಂದು ಭಾಷೆ ಆಡುವ ಯಾವುದೇ ಪ್ರದೇಶವನ್ನು ಗಮನಿಸಿದಾಗ ಅಲ್ಲಿ ಒಂದು ಜಾತಿ ಅಥವಾ ವರ್ಗದ ಭಾಷೆ ಅಲ್ಲಿಯ ಇನ್ನೊಂದು ಜಾತಿ ಅಥವಾ ವರ್ಗದ ಭಾಷೆಗಿಂತ ಭಿನ್ನವಾಗಿರುವುದು ಕಂಡು ಬರುತ್ತದೆ. ಹೀಗೆ ಇಂತಹ ಸಾಮಾಜಿಕ ಸಂದರ್ಭಗಳಲ್ಲಿ ಸಮಾಜವನ್ನು ಆಧರಿಸಿ ಮಾಡಿದ ಭಾಷಾ ಪ್ರಭೇದಗಳಿಗೆ ಸಾಮಾಜಿಕ ಉಪಭಾಷೆ ಎಂದು ಕರೆಯಲಾಗುತ್ತದೆ, ಉದಾಹರಣೆಗೆ : ಉತ್ತರ ಕನ್ನಡದಲ್ಲಿ ಬ್ರಾಹ್ಮಣರ ಕನ್ನಡ, ಒಕ್ಕಲಿಗರ ಕನ್ನಡ, ಅಂಬಿಗರ ಕನ್ನಡ, ಹರಿಜನರ ಕನ್ನಡ ಇತ್ಯಾದಿ. ಈ ಉಪಭಾಷೆಗಳು ಬಳಕೆ ಆಗುವ ಸಂದರ್ಭಗಳು ಬೇರೆ ಬೇರೆ ಆಗಿರುವುದರಿಂದ ಇವುಗಳಲ್ಲಿ ಭಿನ್ನತೆ ಕಂಡುಬರುತ್ತದೆ.
ಭಾಷಾತಜ್ಞರ ಪ್ರಕಾರ ಒಂದು ಪ್ರದೇಶದಲ್ಲಿಯ ಮೇಲವರ್ಗಕ್ಕೆ ಸೇರಿದ ವ್ಯಕ್ತಿ ಕೆಳವರ್ಗದವರ ಸಾಮಾಜಿಕ ಉಪಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲ ಸಾಮರ್ಥ್ಯ ಪಡೆದಿರುತ್ತಾನೆ. ಕೆಳವರ್ಗದವರಲ್ಲಿ ಈ ಸಾಮರ್ಥ್ಯ ಇರುವುದಾದರೂ ಹೋಲಿಸಿ ದ್ದಲ್ಲಿ ಇದು ಕಡಿಮೆ ಮಟ್ಟದಲ್ಲಿದೆ. ಆದರೆ ಪ್ರಾದೇಶಿಕ ಉಪಭಾಷೆಗಳ ವಿಷಯದಲ್ಲಿ ಹಾಗಿಲ್ಲ, ಇಲ್ಲಿ ಉಪಭಾಷೆಗಳ ನಡುವಿನ ಅಂತರ ಹೆಚ್ಚಿದಂತೆ ಪರಸ್ಪರ ಗ್ರಹಿಕೆಯೂ ಕಡಿಮೆಯಾಗುತ್ತದೆ.
ಸಾಮಾಜಿಕ ಉಪಭಾಷೆಯ ಒಂದು ವೈಶಿಷ್ಟ್ಯವೆಂದರೆ ಒಂದೇ ಜಾತಿ ವರ್ಗಕ್ಕೆ ಸೇರಿದ ಜನರ ಭಾಷೆಯಲ್ಲಿಯೇ ಮತ್ತು ಬೇರೆ ಬೇರೆ ಪ್ರದೇಶಗಳಿಗನುಗುಣವಾಗಿ ಭಿನ್ನತೆ ಇರುತ್ತದೆ. ಉದಾಹರಣೆಗೆ : ಉತ್ತರ ಕನ್ನಡದ ಹವ್ಯಕ ಬ್ರಾಹ್ಮಣರ ಕನ್ನಡ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ.ಅಂತೆಯೇ ಒಕ್ಕಲಿಗರ ಕನ್ನಡವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ . ಹೀಗೆ ಅನೇಕ ಸಮುದಾಯಗಳ ಸಾಮಾಜಿಕ ಉಪಭಾಷೆಗಳಲ್ಲಿ ಭಿನ್ನತೆಯಿರುವುದು ಕಂಡು ಬರುತ್ತದೆ, ಆದರೆ ಈ ಭಿನ್ನತೆಗಳು ಬೇರೆ ಬೇರೆ ಜಾತಿ ವರ್ಗಕ್ಕೆ ಸೇರಿದ ಉಪಭಾಷೆಗಳಿಗೆ ಹೋಲಿಸಿದರೆ ಅತ್ಯಂತ ಅಲ್ಪ ಪ್ರಮಾಣದಲ್ಲಿರುತ್ತದೆ. ಅಂದರೆ ಹವ್ಯಕರ ಕನ್ನಡಕ್ಕೆ ಹೋಲಿಸಿದಾಗ ನಾಮದಾರಿ ಸಮುದಾಯದ ಕನ್ನಡ ಅತ್ಯಂತ ಭಿನ್ನವಾಗಿರುತ್ತದೆ. ಅಂತೆಯೇ ಹಾಲಕ್ಕಿ ಕನ್ನಡ, ಅಂಬಿಗರ ಕನ್ನಡ ಇತ್ಯಾದಿಗಳೂ ಭಿನ್ನವಾಗಿರುತ್ತವೆ. ಈ ಭಿನ್ನತೆ ಹವ್ಯಕ -ಹವ್ಯಕ ಕನ್ನಡದಲ್ಲಿ ಪ್ರದೇಶಕ್ಕನುಗುಣವಾಗಿ ಇಷ್ಟು ಪ್ರಮಾಣದಲ್ಲಿರುವುದಿಲ್ಲ. ಶಬ್ದಗಳಲ್ಲಿ, ಧ್ವನಿಯಲ್ಲಿ, ಕ್ರಿಯಾಪದಗಳಲ್ಲಿ ಅಲ್ಪ ಪ್ರಮಾಣದಲ್ಲಿರುವುದು ಕಂಡು ಬರುತ್ತದೆ. ಇದೊಂದು ಉಪಭಾಷೆಯ ವೈಶಿಷ್ಟ್ಯವೆಂದು ಹೇಳಬಹುದು.
ಸಾಮಾನ್ಯವಾಗಿ ಉಪಭಾಷೆಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಶಬ್ದಗಳಲ್ಲಿ, ಧ್ವನಿ ವ್ಯವಸ್ಥೆಯಲ್ಲಿ, ವಾಕ್ಯ ರಚನೆಯಲ್ಲಿ, ಅರ್ಥವ್ಯವಸ್ಥೆಯಲ್ಲಿ ಇರುತ್ತವೆ. ಅಥವಾ ಉಪಭಾಷೆಗಳ ಅಧ್ಯಯನದಲ್ಲಿ ಭಾಷಾವಿಜ್ಞಾನಿಗಳು ಸಾಮಾನ್ಯವಾಗಿ ಶಬ್ದದ ಕ್ರಮ ಪದಪ್ರಯೋಗಗಳಲ್ಲಿಯೂ ಕಂಡುಬರುತ್ತವೆ.
ಉಪಭಾಷೆಗಳ ಅಧ್ಯಯನದಲ್ಲಿ ಭಾಷಾವಿಜ್ಞಾನಿಗಳು ಸಾಮಾನ್ಯವಾಗಿ ಶಬ್ದದ ಬದಲು ಆಯಾ ಭಾಷೆಯ ನಿರ್ದಿಷ್ಟ ಧ್ವನಿಯನ್ನು ಅಥವಾ ರಚನೆಯನ್ನು ಸೀಮಾರೇಜಿ ಗುರುತಿಸಲು ಆಧಾರವಾಗಿಟ್ಟುಕೊಳ್ಳುತ್ತಾರೆ . ಕೆಲವೊಮ್ಮೆ ಅನೇಕ ಸೀಮಾ ರೇಖೆಗಳ ಸಮಾನಾಂತರವಾಗಿ ಸಾಗಿರಬಹುದು. ಇವು ಒಂದು ಉಪಭಾಷೆಯ ಗಡಿಯನ್ನು ಇನ್ನೊಂದು ಉಪಭಾಷೆಯಿಂದ ಪ್ರತ್ಯೇಕಿಸುವ ರೇಖೆಗಳು.
ಈ ರೀತಿಯಲ್ಲಿ ಭಾಷಾ ಪ್ರದೇಶವನ್ನು ಉಪಭಾಷಾ ಪ್ರದೇಶಗಳಾಗಿ ವಿಂಗಡಿಸು ವಾಗ ಶಬ್ದವನ್ನು ಆಧಾರವಾಗಿಟ್ಟುಕೊಳ್ಳುವುದಕ್ಕಿಂತ ನಿರ್ದಿಷ್ಟ ಧ್ವನಿಯನ್ನೋ ವಾಕ್ಯರಚನೆ ಯನ್ನೋ, ವ್ಯಾಕರಣ ರಚನೆಯನ್ನೇ ಆಧಾರವಾಗಿಟ್ಟುಕೊಳ್ಳುವದೇ ಉತ್ತಮ. ಕಾರಣ ಶಬ್ದವನ್ನು ಆಧಾರವಾಗಿಟ್ಟುಕೊಂಡು ಸೀಮಾ - ರೇಖೆಗಳು ಸಮಾನಂತರಗಳಲ್ಲಿ ಕಂಡು ಬರುವುದು ಕಡಿಮೆ. ಇವು ಒಂದನ್ನೊಂದು ಛೇದಿಸುವ ಅನೇಕ ಚಿಕ್ಕ ಚಿಕ್ಕ ವೃತ್ತ ಗಳಾಗಿರುತ್ತವೆ. ಪರಸ್ಪರ ಸಂಪರ್ಕ, ಕೊಡುಕೊಳ್ಳುವಿಕೆಯಿಂದಾಗಿ ಭಾಷೆಯ ಶಬ್ದ ಭಂಡಾರ ಸದಾ ವ್ಯತ್ಯಾಸಗೊಳ್ಳುತ್ತಲೇ ಇರುತ್ತದೆ. ಇದರಿಂದ ಸೀಮಾರೇಖೆಗಳೂ ಆಗಾಗ ಬದಲಾಗುತ್ತಿರುತ್ತವೆ. ತುಲನಾತ್ಮಕವಾಗಿ ಧ್ವನಿ ಅಥವಾ ವ್ಯಾಕರಣ ರಚನೆ ಯನ್ನಾಧರಿಸಿದ ಸೀಮಾರೇಖೆಗಳು ಸ್ಥಿರವಾದವುಗಳಾಗಿರುತ್ತವೆ. ಆದ್ದರಿಂದ ಉಪ ಭಾಷೆಗಳ ವಿಂಗಡಣೆಗೆ ಇವು ಹೆಚ್ಚು ಸಹಕಾರಿ.
ಹಾಗಾದರೆ ಉಪಭಾಷೆಗಳ ಅಧ್ಯಯನ ಪ್ರಾರಂಭವಾಗಿದ್ದು ಯಾವಾಗ? ಉಪಭಾಷಾ ಅಧ್ಯಯನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಉಪಭಾಷಾ ಅಧ್ಯಯನ ( Dialectical Studies ) : ಬೇರೆ ಬೇರೆ ಪ್ರದೇಶಗಳಿಗನುಗುಣವಾಗಿ ಭಾಷೆಯಲ್ಲಿಯೂ ಪ್ರಾದೇಶಿಕ ಭಿನ್ನತೆಯಿರುವ ಕಲ್ಪನೆ ಅತ್ಯಂತ ಹಳೆಯದಾದದ್ದು , ಆದರೆ ಇದರ ವ್ಯವಸ್ಥಿತವಾದ ಅಧ್ಯಯನ ಹಳೆಯದ್ದಲ್ಲ , ಇದು ಪ್ರಾರಂಭವಾದದ್ದು 19 ನೇಯ ಶತಮಾನದಿಂದೀಚೆಗೆ 1876 ರಲ್ಲಿ ಜರ್ಮನಿಯಲ್ಲಿ ಜಾರ್ಜವೆಂಕರ್ ಎಂಬ ಭಾಷಾ ತಜ್ಞ ನಡೆಸಿದ ಅಧ್ಯಯನವೇ ಮೊದಲ ಸಮಗ್ರ ಅಧ್ಯಯನವಾಗಿದೆ. ಮೊದಲು ಈತನು ಜರ್ಮನಿಯ ಡಸೆಲ್ ಡಾರ್ಘ ಜರ್ಮನಿಗೆ ತನ್ನ ಪರಿವೀಕ್ಷಣಾಕಾರ್ಯ ವಿಸ್ತರಿಸಿದ. ಭಿನ್ನ ಪ್ರದೇಶಗಳಲ್ಲಿ ಭಾಷೆ ಭಿನ್ನತೆ ಪಡೆದಿರುತ್ತದೆ ಎಂಬ ವಿಚಾರ ಈತನ ಪರಿವೀಕ್ಷಣೆಯಿಂದ ತಿಳಿದುಬಂತು.ಈತನ ಆನಂತರ ಗಿಲಿಯೆರೋನ್ ಎಂಬಾತ ಫ್ರಾನ್ಸ್ ದೇಶದ ಪರಿವೀಕ್ಷಣೆ ನಡೆಸಿ 1950 ರಲ್ಲಿ, 'ಅಟ್ಲಾಸ್ ಲಿಂಗ್ವಿಸ್ಟಿಕ್ ಡಿ ಲಾ ಫ್ರಾನ್ಸ್' ಎಂಬ ಪುಸ್ತಕ ಪ್ರಕಟಿಸಿದ, ಈತನ ಕಾರ್ಯ ಹೆಚ್ಚು ವೈಜ್ಞಾನಿಕವಾದದ್ದರಿಂದ ಈತನನ್ನು ಉಪಭಾಷಾಧ್ಯಯನದ ಪಿತಾಮಹನೆಂದು ಕರೆಯುತ್ತಾರೆ. 1939-43 ಅವಧಿಯಲ್ಲಿ ಕುರಾತ್ ಅವರ ನೇತೃತ್ವದಲ್ಲಿ ನ್ಯೂ ಇಂಗ್ಲೆಂಡಿನಲ್ಲಿ ನಡೆಸಿದ ಉಪಭಾಷಾ ಅಧ್ಯಯನದ ಫಲವಾಗಿ “ ಹ್ಯಾಂಡ್ ಬುಕ್ ಆಫ್ ದಿ ಲಿಂಗ್ವಿಸ್ಟಿಕ್ ಜಾಗ್ರಫಿ ಆಫ್ ನ್ಯೂ ಇಂಗ್ಲೆಂಡ್ ” ಎಂಬ ಪುಸ್ತಕ ಪ್ರಕಟವಾಯಿತು. ಇದೇ ಕ್ರಮದಲ್ಲಿ ಮುಂದುವರಿದ ಮ್ಯಾಕ್ ಡೇವಿಡ್ ಎಂಬಾತ “ ದಿ ಡಯಲೆಕ್ಟ್ ಆಫ್ ಅಮೆರಿಕನ್ ಇಂಗ್ಲಿಷ್ ” ಎಂಬ ಪರಿವೀಕ್ಷಣಾ ಕೃತಿಯನ್ನು ಹೊರತಂದ. ಭಾರತದಲ್ಲಿ ಕೂಡ ಭಾಷೆಗಳ ಪರಿವೀಕ್ಷಣಾ ಕಾರ್ಯ ನಡೆದಿದೆ. ಜಾರ್ಜ್ ಗ್ರಿಯರ್‌ಸನ್ ಅವರು ಭಾರತದ ಭಾಷೆ ಉಪಭಾಷೆಗಳ ಪರಿವೀಕ್ಷಣಾ ಕಾರ್ಯ ನಡೆಸಿ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ಎಂಬ ಬೃಹತ್ ಸಂಪುಟಗಳನ್ನು ಹೊರ ತಂದಿದ್ದಾರೆ.
ಒಂದು ಭಾಷೆಯ ಕೆಲವು ಪ್ರಾದೇಶಿಕ ಉಪಭಾಷೆಗಳು ಆ ಭಾಷೆಯ ಹಳೆಯ ರೂಪಗಳನ್ನು ಕೆಲಮಟ್ಟಿಗೆ ಉಳಿಸಿಕೊಂಡಿರುವ ಸಾಧ್ಯತೆ ಇರುವುದರಿಂದ ಹಾಗೂ ಆ ಭಾಷೆಗೆ ಸಂಬಂಧಪಟ್ಟಂಥ ಐತಿಹಾಸಿಕ ಬದಲಾವಣೆಗಳ ದಿಕ್ಕನ್ನು ಸೂಚಿಸುವ ಸಾಧ್ಯತೆ ಇರುವುದರಿಂದ ಈ ಉಪಭಾಷೆಯ ಕಲ್ಪನೆ ಐತಿಹಾಸಿಕ ಭಾಷಾವಿಜ್ಞಾನಿಗಳಿಗೆ ಭಾಷೆಯ ಪುನಾರಚನೆಯ ದೃಷ್ಟಿಯಿಂದ ಬೆಲೆಯುಳ್ಳದ್ದು, ಹಾಗೂ ಈ ದಿಸೆಯಲ್ಲಿ ಉಪಭಾಷಾ ಅಧ್ಯಯನ ಅಗತ್ಯವಾದದ್ದು.
ಉಪಭಾಷಾಧ್ಯಯನ ಮುಖ್ಯವಾಗಿ ಮೂರು ಘಟ್ಟಗಳಲ್ಲಿ ನಡೆಯುತ್ತದೆ. ಪ್ರಶ್ನಾವಳಿಯ ತಯಾರಿಕೆ, ಉಪಭಾಷಾ ಪರಿವೀಕ್ಷಣೆ ಮತ್ತು ಉಪಭಾಷಾ ಭೂಪಟ ರಚನೆ. ಯಾವುದೇ ಉದ್ದೇಶಿತ ಉಪಭಾಷೆಯ ಎಲ್ಲ ರಚನೆಗಳನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ ಅಳವಡಿಸಿಕೊಂಡ ಧ್ವನಿ, ಪದ, ಪದಪುಂಜ, ವಾಕ್ಯಗಳ ಸಮೂಹವೇ ಪ್ರಶ್ನಾವಳಿ ಎನಿಸಿಕೊಳ್ಳುತ್ತದ. ಅಧ್ಯಯನಕಾರ ಈ ಪ್ರಶ್ನಾವಳಿ ಆಧರಿಸಿ ಆಯಾ ಉಪಭಾಷೆ ಮಾತನಾಡುವವನೊಡನೆ ಸಂಭಾಷಿಸಿ, ಸಂಭಾಷಣೆಯನ್ನು ಧ್ವನಿಲಿಪಿಗೆ ಇಳಿಸಿಕೊಳ್ಳಬಹುದು ಅಥವಾ ಧ್ವನಿಮುದ್ರಣ ( ರೆಕಾರ್ಡ್ ) ಮಾಡಿಸಿ ಕೊಳ್ಳಬಹುದು. ಉಪಭಾಷಿಕನಿರುವ ಪ್ರದೇಶಕ್ಕೆ ಹೋಗಿ ಅವನಿಂದ ಸಾಮಗ್ರಿ, ಕಲೆ ಹಾಕುವುದಕ್ಕೆ ಉಪಭಾಷಾ ಪರೀಕ್ಷಣೆ ಎಂದು ಹೆಸರು. ಹೀಗೆ ಸಂಗ್ರಹಿಸಿದ ಭಾಷಾ ಸಾಮಗ್ರಿಯನ್ನು ವಿಶ್ಲೇಷಣೆಗೂ, ಭೂಪಟ ರಚನೆಗೂ ಬಳಸಿಕೊಳ್ಳಬಹುದು.
ಉಪಭಾಷಾ ಭೂಪಟ ತಯಾರಿಸುವಾಗ ಮೊದಲು ಭೌಗೋಳಿಕವಾಗಿ ಯಾವ ಯಾವ ಶಬ್ದಗಳ ವ್ಯಾಪ್ತಿ ಎಲ್ಲೆಲ್ಲಿಯವರೆಗಿದೆ ಎಂಬುದನ್ನು ಕಂಡುಕೊಳ್ಳಬೇಕು . ಆನಂತರ ನಿರ್ದಿಷ್ಟ ಶಬ್ದವನ್ನು ಆಯ್ದುಕೊಂಡು ಅದು ಬಳಕೆಯಲ್ಲಿರುವ ಸ್ಥಾನಗಳನ್ನೆಲ್ಲ ಭೂಪಟದಲ್ಲಿ ಗುರುತಿಸುತ್ತ ಹೋಗಬೇಕು . ಅದೇ ಅರ್ಥಕೊಡುವ ಇನ್ನಿತರ ರೂಪಗಳು, ಬಳಕೆಯಲ್ಲಿರುವ ಸ್ಥಾನಗಳನ್ನೂ ಗುರುತಿಸಿಕೊಳ್ಳಬೇಕು.
ಆನಂತರ ಒಂದೇ ರೂಪದ ಹಾಗೂ ಅದೇ ಅರ್ಥದ ರೂಪ ಬಳಕೆಯಲ್ಲಿರುವ ಸ್ಥಾನಗಳೆಲ್ಲ ಒಳಗೊಳ್ಳುವಂತೆ ರೇಖೆಯನ್ನು ಎಳೆಯಬೇಕು. ಈ ರೇಖೆ ಆ ಭಾಷಾ ರೂಪದ ವ್ಯಾಪ್ತಿಯನ್ನು ಹೇಳುತ್ತದೆ. ಇದಕ್ಕೆ ಸೀಮಾರೇಖೆ (ಐಸೋಗ್ಲಾಸ್ ) ಎಂದು ಹೆಸರು. ಭಾಷಾ ರೂಪಗಳನ್ನು ಆಧರಿಸಿ ಇಂಥ ಅನೇಕ ಸೀಮಾರೇಖೆಗಳನ್ನು ಎಳೆಯಬಹುದು. ಸೀಮಾರೇಖೆಗಳಿಂದ ಕೂಡಿದ ಇಂಥ ಭೂಪಟಗಳನ್ನು ಉಪಭಾಷಾಭೂಪಟ ಎನ್ನುತ್ತಾರೆ.
ಉಪಭಾಷೆ ಮತ್ತು ಶಿಷ್ಟಭಾಷೆ ( Dialect Language and Academic Language ) : ಒಂದು ಪ್ರದೇಶದಲ್ಲಿ ಪ್ರಾದೇಶಿಕವಾಗಿ, ಸಾಮಾಜಿಕವಾಗಿ, ಹಲವಾರು ಉಪಭಾಷೆಗಳಿರುತ್ತವೆ ಎಂಬುದನ್ನು ಈಗಾಗಲೇ ಚರ್ಚಿಸಲಾಗಿದೆ.ಈ ರೀತಿಯಲ್ಲಿ ಬೇರೆ ಬೇರೆ ಪ್ರದೇಶಗಳ ಅಥವಾ ಸಮಾಜಗಳ ಸಾಮಾನ್ಯ ಜನರು ಬಳಸುವ ಉಪಭಾಷೆಗಳಲ್ಲಿ ಪ್ರಾದೇಶಿಕವಾದ, ಸಾಮಾಜಿಕವಾದ ವ್ಯತ್ಯಾಸಗಳು ಇರುತ್ತವೆ. ಆದರೆ ಸುಶಿಕ್ಷಿತರು, ಚಿಂತಕರು, ಗಂಭೀರವಾದ ಚಿಂತನ, ಚರ್ಚೆ, ಸಂಶೋಧನೆ, ಭಾಷಣ, ಇಂತಹ ಸಂದರ್ಭ ಗಳು ಬಂದಾಗ ಇವರಿಗೆ ತಮ್ಮದೇ ಆದ ಉಪಭಾಷೆಯಿದ್ದರೂ ಒಂದು ಪ್ರಾದೇಶಿಕವಾದ ಸಾಮಾನ್ಯವಾದ ಭಾಷೆಯನ್ನು ಬಳಸುತ್ತಾರೆ, ಇದನ್ನು'ಶಿಷ್ಟ ಭಾಷೆ' ಎಂಬುದಾಗಿ ಗುರುತಿಸಲಾಗಿದೆ. ಉದಾಹರಣೆಗೆ : ಒಬ್ಬ ಚಿಂತಕ ಧಾರವಾಡ ಕನ್ನಡದ ಉಪ ಭಾಷೆಯವನಾಗಿದ್ದು ಕನ್ನಡ ಪತ್ರಿಕೆಯಲ್ಲಿ ಒಂದು ಚಿಂತನ ಪ್ರಬಂಧ ಮಂಡಿಸುವಾಗ ಸರ್ವಸಾಮಾನ್ಯ ಕರ್ನಾಟಕದ ಶಿಷ್ಟ ಭಾಷೆ ಕನ್ನಡದಲ್ಲಿ ಮಂಡಿಸುತ್ತಾನೆ. ಈ ಶಿಷ್ಟ ಭಾಷೆ ಒಂದು ಚಿಕ್ಕ ಪ್ರದೇಶ ಅಥವಾ ಸಮಾಜದವರು ಮಾತನಾಡುವ ಭಾಷೆಯಾಗಿರುವು ದಿಲ್ಲ. ಈ ಶಿಷ್ಟ ಭಾಷೆಗೆ ಭಾಷಾವಾರು ಒಂದು ಗಡಿಯಿರುತ್ತದೆ. ಒಂದು ಹಿರಿದಾದ ಪ್ರದೇಶದ ಭಾಷೆಯಾಗಿರುತ್ತದೆ. ಒಂದು ಉಪಭಾಷೆ ಕನ್ನಡದವರು ತಮಗೆ ಪರಿಚಿತ ವಲ್ಲದ ಇನ್ನೊಂದು : ಉಪಭಾಷೆ ಕನ್ನಡದವರೊಂದಿಗೆ ಸಂಪರ್ಕಿಸುವಾಗ ಸಾಮಾನ್ಯವಾದ ಕನ್ನಡ ಶಿಷ್ಟಭಾಷೆಯಲ್ಲಿ ವ್ಯವಹರಿಸುತ್ತಾರೆ. ಕಾರಣವೆಂದರೆ ತಮ್ಮ ಉಪಭಾಷೆಯ ಅರಿವಿಲ್ಲದಿರುವ ಭಾವನೆ ಹಾಗೂ ಹಾಸ್ಯಾಸ್ಪದವಾಗಬಹುದೆಂಬ ಚಿಂತೆಯಿರುತ್ತದೆ. ಉದಾಹರಣೆಗೆ : ಮಂಗಳೂರು ಕನ್ನಡದವನೊಬ್ಬನು ಮಂಗಳೂರು ಕನ್ನಡ ಪರಿಚಯ ವಿಲ್ಲದ ಬೆಂಗಳೂರು ಕನ್ನಡಿಗನೊಂದಿಗೆ ಸಂಪರ್ಕಿಸುವಾಗ ಸಾಮಾನ್ಯ ಕನ್ನಡ ಶಿಷ್ಟ ಭಾಷೆಯಿಂದಲೇ ವ್ಯವಹರಿಸುತ್ತಾನೆ.
ಉಪಭಾಷೆಯ ಅಳಿವಿನ ಪ್ರಶ್ನೆ ಬಂದಾಗ ಆಯಾ ಉಪಭಾಷೆಯವರು ಹೇಗೆ ಜಾಗ್ರತರಾಗಿ ಹೋರಾಡುತ್ತಾರೆಯೋ ಹಾಗೆ ಶಿಷ್ಟಭಾಷೆಯ ಅಳಿವಿನ ಪ್ರಶ್ನೆ ಎದ್ದಾಗ ಎಲ್ಲಾ ಆ ಶಿಷ್ಟ ಭಾಷೆಯ ಉಪಭಾಷಿಕರು, ಆ ಪ್ರದೇಶದ ಉಳಿದ ಅನ್ಯ ಭಾಷಿಕರೂ ಆ ಶಿಷ್ಟ ಭಾಷೆಯ ಉಳಿವಿಗಾಗಿ ಹೋರಾಡುತ್ತಾರೆ. ಉದಾಹರಣೆಗೆ : ಕರ್ನಾಟಕದಲ್ಲಿ ಕನ್ನಡ ಭಾಷೆಯ ಅಳಿವು - ಉಳಿವಿನ ಪ್ರಶ್ನೆ ಬಂದಾಗ ಕನ್ನಡ ಉಪಭಾಷಿಕರ ಜೊತೆಯಲ್ಲಿ ಕರ್ನಾಟಕದ ಇತರ ಭಾಷಿಕರೂ ಹೋರಾಟದಲ್ಲಿ ಬೆರೆಯುತ್ತಾರೆ. ( ಕೊಂಕಣಿ, ತುಳು ಕೊಡವ, ಉರ್ದು ಮುಂತಾದ ಕರ್ನಾಟಕದ ಭಾಷಾ ಸಮುದಾಯದವರು) ಇದಕ್ಕೆ ಶಿಕ್ಷಣದಲ್ಲಿ ಇಂದು ಕನ್ನಡದ ಅಧ್ಯಯನದ ಕುರಿತು ನಡೆಯುತ್ತಿರುವ ಹೋರಾಟ ನೆನೆಯಬಹುದು.ಇದು ಕಾನೂನಿನ ಮೊರೆ ಹೋಗಿರುವುದು ಎಲ್ಲರಿಗೂ ವೇದ್ಯವಾದ ಸಂಗತಿಯಾಗಿದೆ. ಕೆಲವೊಮ್ಮೆ ಶಿಷ್ಟಭಾಷೆಯ ಉಳಿವಿನ ಹೋರಾಟಗಳು ತೀವರೂಪ ತಾಳುವುದೂ ಉಂಟು. ಇಂತಹ ಜನರ ಭಾಷೆಯ ಕುರಿತಾದ ಒಲವು,ಅದರ ಉಳಿವಿಕೆಗಾಗಿ ಹೋರಾಡುವ ಪ್ರವೃತ್ತಿ ಒಂದು ಭಾಷೆಯ ಉಳಿಯುವಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ.ಭಾಷೆಯ ಉಳಿಯುವಿಕೆಯ ಜೊತೆಯಲ್ಲಿಯೇ ಆ ಭಾಷಿಕ ಜನರ ಸಂಸ್ಕೃತಿ, ಸಂಪ್ರದಾಯ, ಆಚಾರ - ವಿಚಾರಗಳು, ಉಡುಪು, ಕಲೆಗಳು ಉಳಿದುಕೊಂಡು ಬರುವುದು ಗಮನಾರ್ಹವಾಗಿದೆ.
ಪ್ರಸ್ತುತ ಸಮಾಜದಲ್ಲಿ ಉಪಭಾಷೆಗಳ ಉಳಿವು - ಅಳಿವು (Existence and Non Existence of Dialects in Present day Society):
ಪ್ರಸ್ತುತ ಸಮಾಜದಲ್ಲಿ ಜಾಗತೀಕರಣ ಸಂದರ್ಭದಲ್ಲಿ ಆಧುನಿಕವಾದ ಸಂಪರ್ಕ ಹಾಗೂ ಸಂವಹನ ವ್ಯವಸ್ಥೆಗಳ ಅದ್ಭುತ ಸಾಧನೆಯಿಂದಾಗಿ ಜಗತ್ತು ಒಂದಾಗಿದೆ. ಇಡೀ ಜಗತ್ತಿನ ಜನತೆ ದೂರ - ದೂರದ ಪ್ರದೇಶಗಳೊಂದಿಗೆ ನಿಕಟ ಸಂಪರ್ಕವಿಟ್ಟು ಕೊಳ್ಳುವುದು ಸಾಧ್ಯವಾಗಿದೆ. ಇದಕ್ಕೆ ಯಾವ ನೈಸರ್ಗಿಕ ಅಡೆ - ತಡೆಗಳೂ ಅಡ್ಡಿಯನ್ನುಂಟು ಮಾಡಲಾರವು. ಜಗತ್ತಿನಲ್ಲಿ ಸಾಕ್ಷರತೆಯ ಪ್ರಮಾಣವೂ ಹೆಚ್ಚಾಗುತ್ತಿರುವುದು ಇದಕ್ಕೆ ಪೂರಕವಾಗಿದೆ. ಇದರಿಂದ ಬೇರೆ ಬೇರೆ ಪ್ರದೇಶಗಳ ಭಾಷಾ ಪರಿಚಯ ವಾಗುವುದು ಸುಲಭ ಸಾಧ್ಯವಾಗಿದೆ. ಹಾಗಾದರೆ ಪ್ರಾದೇಶಿಕ ಉಪಭಾಷೆಗಳು ಹಾಗೂ ಸಾಮಾಜಿಕ ಉಪಭಾಷೆಗಳಲ್ಲಿನ ವ್ಯತ್ಯಾಸಗಳು ಕಡಿಮೆಯಾಗುತ್ತವೆಯೆ? ಅಳಿಸಿ ಹೋಗುತ್ತವೆಯೆ? ಎಂಬ ಪ್ರಶ್ನೆಗಳು ಏಳುವುದು ಸಹಜ. ಆದರೆ ಭಾಷಾತಜ್ಞರ ಪ್ರಕಾರ ಹೀಗಾಗಲು ಸಾಧ್ಯವಿಲ್ಲ.
ಒಂದು ಕಾಲದಲ್ಲಿ ಸಂಪರ್ಕದ ಕೊರತೆಯಿಂದಾಗಿ ಪ್ರಾದೇಶಿಕ ಉಪಭಾಷೆಗಳು ಉಂಟಾಗಿದ್ದರೂ ಇಂದು ಈ ಒಂದೇ ಒಂದು ಜ್ಞಾನದಿಂದ ಅವು ಪ್ರತ್ಯೇಕವಾಗಿ ಉಳಿದಿಲ್ಲ. ಇವುಗಳಿಗೆ ಇನ್ನೂ ಹಲವು ಕಾರಣಗಳಿವೆ. ಒಂದು ಉಪಭಾಷಾ ಜನರಲ್ಲಿ ನಾವೆಲ್ಲಾ ಒಂದೇ ' ಎಂಬ ಏಕತೆಯ ಮನೋಭಾವವಿರುತ್ತದೆ. ಇವರ ಸಂಪ್ರದಾಯ, ಸಂಸ್ಕೃತಿ, ರೂಢಿ - ಆಚರಣೆಗಳು, ಜಾನಪದ ಕಲೆಗಳು, ಆಹಾರ ಪದ್ಧತಿ ಮುಂತಾದವುಗಳು ಬೇರೆ ಉಪಭಾಷಾ ಜನರಿಂದ ಇವರನ್ನು ಬೇರ್ಪಡಿಸಿರುತ್ತವೆ. ಇವರು ಸದಾ ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತ ಇವುಗಳನ್ನು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾ ಬರುತ್ತಾರೆ, ತಮ್ಮ ಭಾಷೆಯ ಉಳಿವಿನಲ್ಲಿಯೂ ಇದೇ ಭಾವನೆ ಹೊಂದಿರುತ್ತಾರೆ. ಭಾಷೆ ಕೇವಲ ಸಂಪರ್ಕ ಸಾಧನ ಮಾತ್ರವಲ್ಲ ಇದು ಸಂಸ್ಕೃತಿ - ಸಂಪ್ರದಾಯಗಳ ವಾಹಕವೂ ಆಗಿರುತ್ತದೆ. ಇದರಿಂದ ಆಯಾ ಪ್ರದೇಶದ ಉಪಭಾಷೆಗಳ ಉಳಿವು ಸಾಧ್ಯವಾಗುತ್ತದೆ. ಒಂದು ದೊಡ್ಡ ಪ್ರದೇಶದ ಜನರು ತಮ್ಮ ಶಿಷ್ಟ ಪ್ರಾದೇಶಿಕ ಭಾಷೆಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾರೋ ಹಾಗೆಯೇ ಉಪಭಾಷೆಯವರೂ ತಮ್ಮ ಭಾಷೆಯ ಉಳಿವಿಗಾಗಿ ಹೋರಾಡುತ್ತಾರೆ. ಉದಾಹರಣೆಗೆ : ಕರ್ನಾಟಕದಲ್ಲಿ 'ಕನ್ನಡ' (ಶಿಷ್ಟ ಭಾಷೆ) ದ ಭಾಷೆಯ ಕುರಿತು ಸಮಸ್ಯೆ ತಲೆದೋರಿದಾಗ ಅದನ್ನು ಉಳಿಸಿಕೊಳ್ಳುವಲ್ಲಿ ಕನ್ನಡಿಗರೆಲ್ಲ 'ನಾವೆಲ್ಲ ಒಂದೇ ' ಎಂಬ ಭಾವನೆಯಿಂದ ಒಂದಾಗಿ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡುತ್ತಾರೆ. ಹಾಗೆಯೆ ಮಂಡ್ಯ ಕನ್ನಡದವರಿಗೆ ತಮ್ಮ ಕನ್ನಡದ ಉಳಿವು-ಅಳಿವಿನ ಪ್ರಶ್ನೆ ಬಂದಾಗ ಅವರೆಲ್ಲ ಒಂದು ಎಂಬ ಭಾವನೆಯಿಂದ ಆ ಭಾಷೆಯ ಉಳಿವಿಗಾಗಿ ಹೆಣಗುತ್ತಾರೆ. ಇದೇ ರೀತಿ ಧಾರವಾಡ, ಬೆಂಗಳೂರು, ಮಂಗಳೂರು, ಕಲಬುರಗಿ, ಉತ್ತರ ಕನ್ನಡ ಮುಂತಾದವರೂ ತಮ್ಮ ಉಪಭಾಷೆಯ ಉಳಿವಿಗಾಗಿ ಪ್ರಯತ್ನಿಸುತ್ತಾರೆ. ಇದರಿಂದ ಆ ಭಾಷೆಯ ಉಳಿವು ಸಾಧ್ಯವಾಗುತ್ತದೆ. ಜೊತೆಯಲ್ಲಿ ಸಂಸ್ಕೃತಿ - ಸಂಪ್ರದಾಯ, ಆಹಾರ ಪದ್ಧತಿ ಉಡುಪು, ಜಾನಪದ ಕಲೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಾಗುತ್ತ ಬರಲು ಸಾಧ್ಯವಾಗುತ್ತದೆ. ಭಾಷೆಯ ಉಳಿವು ಜಾನಪದ ಕಲೆಗಳ, ಉಳಿಪಿಗೆ ಪ್ರಮುಖ ಕಾರಣವಾಗಿರುತ್ತದೆ. ಉದಾಹರಣೆಗೆ : ಉತ್ತರ ಕನ್ನಡ ಹಾಗೂ ಕನ್ನಡದ ಪ್ರಮುಖ ಕಲೆ 'ಯಕ್ಷಗಾನ' ಈ ಕಲೆಯಲ್ಲಿ ಎರಡೂ ಪ್ರದೇಶಗಳಲ್ಲಿ ಭಿನ್ನತೆ ದಕ್ಷಿಣ ಯಿದೆ. ಯಕ್ಷಗಾನದ ಭಾಷೆ, ವೇಷ - ಭೂಷಣ, ಕುಣಿತಗಳಲ್ಲಿ ಭಿನ್ನತೆಯಿದೆ. ಇಂತ ಕಲೆಗಳನ್ನು ಉಳಿಸಿಕೊಳ್ಳುವಲ್ಲಿ ಆಯಾ ಪ್ರದೇಶದ ಜನತೆ ಪ್ರಯತ್ನಿಸುವುದು ಸಹja ಇದು ಭಾಷಾ ಉಳಿಯುವಿಕೆಗೂ ಪರೋಕ್ಷವಾಗಿ ಕಾರಣವಾಗುತ್ತದೆ.
ಹೀಗೆ ಭಾಷೆ ಜನರನ್ನು ಇತರ ಪ್ರದೇಶದವರಿಂದ ಪ್ರತ್ಯೇಕವಾಗಿಸಿ, ವಿಶಿಷ್ಟವಾಗಿಸಿ ತೋರಿಸುವ ಗುರುತು ಹೇಗೋ ಹಾಗೆಯೇ ತಮ್ಮ ತಮ್ಮ ಪ್ರದೇಶದ ಜನರೊಂದಿಗೆ ಸೇರಿಸಿ ಆ ಭಾಷೆಯ ಸಂಸ್ಕೃತಿ- ಸಂಪ್ರದಾಯಗಳನ್ನು ಕಾಪಾಡಿಕೊಂಡು ಹೋಗುವ ಸಾಧನವೂ ಆಗಿದೆ.
ಬೇರೆ ಪ್ರದೇಶದ ಜನರ ಸಂವಹನ - ಸಂಪರ್ಕದಿಂದಾಗಿ ತಮ್ಮ ಉಪಭಾಷೆ ಯಲ್ಲಿ ಶಬ್ದ ಬಳಕೆಯ ಸಾಧ್ಯತೆ ಹೆಚ್ಚು ಕಡಿಮೆಯಾದರೂ ಹುಟ್ಟಿದಾಗಿನಿಂದ ಕಲಿತ ವ್ಯಾಕರಣ ವ್ಯವಸ್ಥೆಯಿಂದಾಗಿ, ಧ್ವನಿ ವ್ಯವಸ್ಥೆಯಿಂದಾಗಿ ಉಚ್ಚಾರಣೆಯಲ್ಲಿ ತೋರುವ ಧ್ವನಿ ಏರಿಳಿತಗಳು ರೂಢಿಗತವಾಗಿರುವುದರಿಂದ ಮೂಲ ಉಪಭಾಷೆ ಸುಲಭವಾಗಿ ಬದಲಾಗುವುದಿಲ್ಲ. ಈ ರೀತಿಯ ಉಚ್ಚಾರಣೆಯ ರೂಢಿ ಹಾಗೂ ತಾನು ಆಯಾ ಪ್ರದೇಶದವನು ಎಂಬ ಅಭಿಮಾನದ ಅನನ್ಯತಾ ಭಾವನೆ ಉಪ -ಭಾಷೆ ನಶಿಸಿಹೋಗದಂತೆ ತಡೆಯುವಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಒಂದು ಗಮನಿಸಬೇಕಾದ ಅಂಶವೆಂದರೆ ಉಪಭಾಷೆಗಳ ಗಡಿಯಲ್ಲಿರುವ ಜನರಿಗೆ ಇನ್ನೊಂದು ಉಪಭಾಷೆಯ ಜೊತೆಯಲ್ಲಿ ನೇರ ಸಂಪರ್ಕವಿರುವುದರಿಂದ ಮುಂದಿನ ಪೀಳಿಗೆ ಸಾಗಿದಂತೆ ಅವರ ಒಲವು, ಉಚ್ಚಾರಣೆಯ ರೂಢಿ ಬದಲಾಗುತ್ತ ಸಾಗಿದರೆ ಉಪಭಾಷಾ ಪ್ರದೇಶದ ವಿಸ್ತಾರ ಹಿಗ್ಗಬಹುದು ಅಥವಾ ಕುಗ್ಗಬಹುದು.
Comments
Post a Comment