ಭಾಷಾ ವ್ಯತ್ಯಾಸ

 


(How Languages are Different?) ಭಾಷಾ ವ್ಯತ್ಯಾಸ-ಅರ್ಥ : ಯಾವುದೇ ಒಂದು ಭಾಷೆಯಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳಾಗುತ್ತ ಸಾಗಿದರೆ ಅದಕ್ಕೆ ಭಾಷಾ ವ್ಯತ್ಯಾಸ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲ ಭಾಷೆಗಳಲ್ಲಿಯೂ ಸಾಮಾನ್ಯವಾದ ಪ್ರಕ್ರಿಯೆ. ಭಾಷೆ ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಭಾಷೆಗಳ ಪ್ರಭಾವದಿಂದಲೋ ಅಥವಾ ಮಾತುಗಾರಿಕೆಯ ಕ್ರಮದಲ್ಲಿಯ ವ್ಯತ್ಯಾಸಗಳಿಂದಲೋ ಶಬ್ದ ವ್ಯತ್ಯಾಸಗಳು, ಅರ್ಥ ವ್ಯತ್ಯಾಸಗಳು ಹುಟ್ಟುತ್ತಲೇ ಇರುತವೆ. ಇವು ಆಯಾ ಭಾಷೆಯಲ್ಲಿ ಮಿಳಿತವಾಗಿ ಭಾಷೆಗಳ ವೈಶಿಷ್ಟ್ಯವೋ ಎಂಬಂತೆ ಬಳಕೆಗೆ ಬಂದು ಭಾಷಾ ವ್ಯತ್ಯಾಸಕ್ಕೆ ಕಾರಣವಾಗುತ್ತವೆ. ಒಂದು ಭಾಷೆ ಒಂದು ಕಾಲದಲ್ಲಿ . ಇದ್ದಂತೆ ಮುಂದೆ 40-50 ವರ್ಷಗಳು ಕಳೆದ ಬಳಿಕ ಅದೇ ರೀತಿ ಇರುವುದಿಲ್ಲ. ಭಾಷೆ ಬಳಸುವ ರೀತಿಯಲ್ಲಿ, ಶಬ್ದಗಳಲ್ಲಿ, ಸ್ವರ ಭಾರದಲ್ಲಿಯೂ ವ್ಯತ್ಯಾಸಗಳಾಗಬಹುದು ಇದೇ ಭಾಷಾ ವ್ಯತ್ಯಾಸ .

ಭಾಷಾ ವ್ಯತ್ಯಾಸ ಉಂಟಾಗುವ ಬಗೆ : ಹುಟ್ಟಿದ ಮಗು ಅನುಕರಣೆಯ ಮೂಲಕ ತನ್ನ ಮನೆ ಭಾಷೆ (ಮಾತೃ ಭಾಷೆ ಅಥವಾ ಮನೆ ಭಾಷೆ) ಯನ್ನು ಕಲಿಯುತ್ತದೆ. ಹೀಗೆ ಒಂದು ಭಾಷೆ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಾಗುತ್ತ ಸಾಗುತ್ತದೆ. ಹೀಗೆ ವರ್ಗಾವಣೆ ಯಾಗುವಾಗ ವ್ಯಕ್ತಿಗಳ ಶಬ್ದ ಬಳಕೆ, ಉಚ್ಚಾರ ಕ್ರಮದಲ್ಲಿ ಬದಲಾವಣೆಗಳಾಗಿ ಅವೇ ಮುಂದುವರೆದುಕೊಂಡು ಹೋದರೆ ಅಲ್ಲಿಂದ ಭಾಷೆಯಲ್ಲಿ ಬದಲಾವಣೆಗಳಾಗ ಬಹುದು.

ಜನಸಾಮಾನ್ಯರು ಜೀವನದಲ್ಲಿ ಹಲವರ ಜೊತೆ, ಹಲವು ರೀತಿಯ ಸಾಮಾಜಿಕ ಸಂದರ್ಭಗಳಲ್ಲಿ ಹಲವು ಕ್ಷೇತ್ರಗಳಲ್ಲಿ ವ್ಯವಹರಿಸುವ ಪ್ರಸಂಗ ಬರುತ್ತದೆ. ಆಗ ಆಯಾ ಸಾಮಾಜಿಕ ಸಂದರ್ಭ, ವ್ಯವಹರಿಸುವ ವಿವಿಧ ಕ್ಷೇತ್ರಗಳಲ್ಲಿ ವ್ಯವಹರಿಸುವ ರೀತಿ ಬದಲಾಗುತ್ತಿರುತ್ತದೆ. ಹೀಗೆ ಸಹಜವಾಗಿ ಬಳಸುವ ಭಾಷೆಯಲ್ಲಿಯೂ ವ್ಯತ್ಯಾಸಗಳಾಗಬಹುದು. ಉದಾಹರಣೆಗೆ: ಔದ್ಯೋಗಿಕ ಕ್ಷೇತ್ರದಲ್ಲಿ ವ್ಯವಹರಿಸುವಾಗ ಒಬ್ಬ ವ್ಯಕ್ತಿ ಕನ್ನಡ ಮಾತನಾಡುವಾಗ ಇಂಗ್ಲಿಷ್ ಪದಗಳನ್ನು ಹೆಚ್ಚಾಗಿ ಬಳಸಬಹುದು. ಸಾಮಾನ್ಯರ ಜೊತೆ ಮಾತನಾಡುವಾಗ ಕನ್ನಡ ಪದಗಳನ್ನೇ ಹೆಚ್ಚಾಗಿ ಬಳಸಬಹುದು. ಹೀಗಾಗಿ 50 ವರ್ಷಗಳ ಹಿಂದಿನ ಕನ್ನಡಕ್ಕೂ ಇಂದಿನ ಕನ್ನಡಕ್ಕೂ ತುಂಬಾ ವ್ಯತ್ಯಾಸ ಕಂಡುಬರುತ್ತದೆ. ಇಂದು ಇಂಗ್ಲಿಷ ಎಂಬ ಕನ್ನಡದ ಪ್ರಕಾರ ಹುಟ್ಟುವಿಕೆಗೆ ಇದೇ ಕಾರಣವೆಂದು ಹೇಳಬಹುದು. ಹಿಂದೆ ಶುದ್ಧ ಕನ್ನಡ ಪದಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಇಂದು ಶುದ್ಧ ಕನ್ನಡ ಪದಗಳು ಇವೆಯೇ ಎಂದು ಹುಡುಕಾಡಿದರೂ ಸಿಗದಷ್ಟು ಕನ್ನಡ ಇಂಗ್ಲಿಷ ಮಯವಾಗಿದೆ.

ಇಂತಹ ಭಾಷಾ ವ್ಯತ್ಯಾಸಗಳು ಧ್ವನಿ ವ್ಯತ್ಯಾಸ, ಅರ್ಥ ವ್ಯತ್ಯಾಸ ಹಾಗೂ ವ್ಯಾಕರಣ ವ್ಯತ್ಯಾಸಗಳಲ್ಲಿ ಕಂಡುಬರುತ್ತವೆ.

1) ಧ್ವನಿ ವ್ಯತ್ಯಾಸ : ಒಂದು ಭಾಷೆಯ ಧ್ವನಿಗಳಲ್ಲಿ ನಡೆಯುವ ವ್ಯತ್ಯಾಸಗಳನ್ನು ಧ್ವನಿ ವ್ಯತ್ಯಾಸ ಎಂದು ಕರೆಯಲಾಗುತ್ತದೆ. ಪರಸ್ಪರ ಕೊಡು-ಕೊಳ್ಳುವಿಕೆಯಿಂದ ಪರಸ್ಪರ ಸಂಬಂಧವುಳ್ಳ ಎರಡು ಭಾಷೆಗಳನ್ನು ಮಾತನಾಡುವ ಇಬ್ಬರು ವ್ಯಕ್ತಿಗಳ ಮಾತುಗಳನ್ನು ಕೇಳಿದಾಗ ಒಂದೇ ಪದಕ್ಕೆ ಅವರಿಬ್ಬರೂ ಬೇರೆ ಬೇರೆ ಧ್ವನಿಗಳನ್ನು ಬಳಸಿದರೆ ಪದದಲ್ಲಿ ಧ್ವನಿ ವ್ಯತ್ಯಾಸವಾಗಿದೆ ಎಂದು ಗುರುತಿಸಲಾಗುತ್ತದೆ. ಉದಾ: ಮೂಲ ದ್ರಾವಿಡಭಾಷೆಯಾದ ತಮಿಳಿನ 'ಪ' ಕಾರ ತಮಿಳು, ತೆಲುಗುಳಲ್ಲಿ '' ಕಾರವಾಗಿಯೇ ಉಳಿದ್ದಿದರೆ ಕನ್ನಡದಲ್ಲಿ 'ಹ' ಕಾರವಾಗಿರುವುದನ್ನು ಕಾಣುತ್ತೇವೆ. ತಮಿಳು ಪಾಲ್, ತೆಲುಗಿನಲ್ಲಿ - ಪಾಲು ' ಆಗಿದೆ ಹಾಗೂ ಕನ್ನಡದಲ್ಲಿ 'ಹಾಲು' ಆಗಿದೆ, ಅಂತೆಯೇ ತಮಿಳಿನ ಪಸಿ, ತೆಲುಗಿನಲ್ಲಿ - ಪಸಿ ಯಾಗಿಯೇ ಉಳಿದುಕೊಂಡಿದೆ ಆದರೆ ಕನ್ನಡದಲ್ಲಿ ಹಸಿವು ಆಗಿದೆ. ಅಂತೆಯೇ ಆರ್ಯ ಭಾಷೆಗಳಲ್ಲಿಯೂ ಇವುಗಳನ್ನು ಗಮನಿಸಬಹುದು. ಮೂಲ ಆರ್ಯಭಾಷೆಯಾದ ಸಂಸ್ಕೃತದ ಪದಗಳು ಕಿಂಚಿತ್ ಧ್ವನಿವ್ಯತ್ಯಾಸವಾಗಿ ಉಳಿದ ಸಂಸ್ಕೃತ ಜನ್ಯ ಆರ್ಯಭಾಷೆಯಲ್ಲಿ ಬಳಕೆಯಾಗುತ್ತಿವೆ ಉದಾ: ಸಂಸ್ಕೃತದ 'ದುಗ್ದಮ್' (ಹಾಲು) ಶಬ್ದ ಹಿಂದಿಯಲ್ಲಿ ದೂದ್‌ ಕೊಂಕಣಿಯಲ್ಲಿಯೂ 'ದೂದ್ ' ಯೆಂದು ಬಳಸಲಾಗುತ್ತದೆ. ಸಂಸ್ಕೃತದ ಶರ್ಕರಂ (ಸಕ್ಕರೆ) ಹಿಂದಿಯಲ್ಲಿ ಶಕ್ಕರ್‌ ಆಗಿದೆ. ಕೊಂಕಣಿಯಲ್ಲಿ ಸಾಕ್ಕರ್ ಎಂದು ಬಳಸಲಾಗುತ್ತದೆ. ಸಂಸ್ಕೃತದ ಮೇಥಿಕಾ (ಮೆಂತೆ) ಹಿಂದಿಯಲ್ಲಿ ಮೇಥಿ ಹಾಗೂ ಕೊಂಕಣಿಯಲ್ಲಿ ಮೆತ್ತಿ ಎಂಬುದಾಗಿ ಬಳಸಲಾಗುತ್ತದೆ, ಈ ರೀತಿಯಲ್ಲಿ ಒಂದೇ ಪದವು ಸಂಬಂಧಿತ ಭಾಷೆಗಳಲ್ಲಿ ಧ್ವನಿವ್ಯತ್ಯಾಸದಿಂದ ಬಳಸ ಲ್ಪಡುವುದನ್ನು ಕಾಣಬಹುದು. ಭಾಷೆಯಲ್ಲಿ ಧ್ವನಿ ವ್ಯತ್ಯಾಸಗಳನ್ನು ಮೊಟ್ಟ ಮೊದಲ ಬಾರಿಗೆ 1822 ರಲ್ಲಿ ತನ್ನ 'ಜರ್ಮನಿಕ್ ಗ್ರಾಮರ್' ಎಂಬ ಪುಸ್ತಕದಲ್ಲಿ ಜಾಕೋಬ್ ಗ್ರಿಮ್ ಎಂಬ ಭಾಷಾವಿಜ್ಞಾನಿ ಗುರುತಿಸಿದರು. ಈಗಲೂ ಇದು 'ಗ್ರಿಮ್ಸ್ ಲಾ' ಎಂದು ಕರೆಸಿಕೊಳ್ಳುತ್ತಿದೆ.

ಧ್ವನಿ ವ್ಯತ್ಯಾಸಗಳು ಮೇಲೆ ವಿವರಿಸಿದಂತೆ ಸಂಬಂಧಿತ ಬೇರೆ ಬೇರೆ ಭಾಷೆಗಳಲ್ಲಿ ಆಗಬಹುದು ಅಥವಾ ಒಂದೇ ಭಾಷೆಯಲ್ಲಿಯೂ ಕಾಲಕ್ರಮದಲ್ಲಿ ಆಗಬಹುದು. ಕನ್ನಡದಲ್ಲಿ ಮೊದಲು ಸಂಸ್ಕೃತದಿಂದ ಬಂದ 'ದೃಷ್ಟಿ' ಪದ ಕ್ರಮೇಣ ' ದಿಟ್ಟಿ' ಎಂಬ ರೂಪ ಪಡೆಯಿತು ಈಗ ಕನ್ನಡದಲ್ಲಿ ದೃಷ್ಟಿ (ತ್ಸ) ಮತ್ತು ದಿಟ್ಟಿ (ಧ್ಬ) ಪದಗಳೆರಡೂ ಬಳಕೆಯಲ್ಲಿವೆ.

ಅಲ್ಲದೇ ಪರಭಾಷೆಯಿಂದ ಎರವಲಾಗಿ ಬಂದ ಪದಗಳು ಧ್ವನಿ ವ್ಯತ್ಯಾಸವಾಗಿ ಆಯಾ ಭಾಷೆಯ ಸ್ವರ ಭಾರ, ವ್ಯಾಕರಣಕ್ಕನುಗುಣವಾಗಿ ಬದಲಾಗುವುದುಂಟು. ಉದಾಹರಣೆಗೆ ಸಂಸ್ಕೃತದ 'ಆ' ಕಾರಾಂತ ಸ್ತ್ರೀಲಿಂಗ ಪದಗಳು ಕನ್ನಡದಲ್ಲಿ 'ಎ' ಕಾರಾಂತವಾಗಿ ನಪುಂಸಕ ಲಿಂಗದಲ್ಲಿ ಬಳಕೆಯಾಗುತ್ತಿವೆ ಸಂಸ್ಕೃತದ 'ಶಾಲಾ (೩) ಕನ್ನಡದಲ್ಲಿ 'ಶಾಲೆ' (ನ) ಯಾಗಿದೆ ಹೀಗೇಯೇ ಸಂಸ್ಕೃತದ  ವಿದ್ಯಾ, ಮಾಲಾ, ಲತಾ, ಕಲಾ, ಶಿಲಾ ಈ ಮುಂತಾದ ಆ ಕಾರಂತ ಸ್ತ್ರೀಲಿಂಗಪದಗಳು ಧ್ವನಿ ವ್ಯತ್ಯಾಸ ಪಡೆದು ಕನ್ನಡದಲ್ಲಿ 'ಎ' ಕಾರಾಂತವಾಗಿ ನಪುಂಸಕ ಲಿಂಗಗಳಾಗಿವೆ.

ಅಲ್ಲದೇ ಇಂಗ್ಲಿಷಿನ ಬಸ್ ಕಾರ್ ಟೈನ್ ಮುಂತಾದ ಪದಗಳು ಕನ್ನಡದಲ್ಲಿ ಪ್ರಥಮಾ ವಿಭಕ್ತಿ 'ಉ' ಕಾರಾಂತವಾಗಿ ಬಸ್ಸು ಕಾರು ಟ್ರೇನು ಎಂಬುದಾಗಿ ಕನ್ನಡದಲ್ಲಿ ಜಾಯಮಾನಕ್ಕನುಗುಣವಾಗಿ ಬಳಸಲಾಗುತ್ತಿದೆ.

2) ಅರ್ಥ ವ್ಯತ್ಯಾಸ : ಒಂದು ಭಾಷೆಯಲ್ಲಿ ಬಂದ ಪದವನ್ನು ಒಂದು ಸನ್ನಿವೇಶ ದಲ್ಲಿ ಬಳಸುತ್ತಿದ್ದು ಅದು ಕಾಲಾ ನಂತರ ಅದೇ ಭಾಷೆಯಲ್ಲಿ ಇನ್ನೊಂದು ಸನ್ನಿವೇಶ ದಲ್ಲಿ ಬಳಕೆಯಾಗುತ್ತಿದ್ದರೆ ಆ ಪದ ಅರ್ಥ ವ್ಯತ್ಯಾಸ ಪಡೆದಿದೆ ಎಂದರ್ಥ. ಇದು ಭಾಷಾ ವ್ಯತ್ಯಾಸದ ಸ್ಪಷ್ಟವಾದ ಕ್ಷೇತ್ರವಾಗಿದೆ. ಉದಾ: ಹಿಂದೆ ಕನ್ನಡದಲ್ಲಿ 'ಸಂಸ್ಥೆ' ಎಂಬ ಪದ ಕ್ಷೇತ್ರಗಳಿಗೆ ಸಂಬಂಧ ಪಟ್ಟಂತೆ ಬಳಸಲ್ಪಡುತ್ತಿತ್ತು. ಕ್ರಮೇಣ ಇದರಿಂದ ಹುಟ್ಟಿಕೊಂಡು 'ಸಂತೆ' (ಧ್ಬ) ಎಂಬ ಪದ ತರಕಾರಿ ಸಂತೆಗೆ ಬಳಸಲ್ಪಟ್ಟಿತು. ಅಲ್ಲದೇ ಒಂದೇ ಭಾಷೆಯಲ್ಲಿ ಒಂದೇ ಪದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಅರ್ಥದಲ್ಲಿ ಬಳಸುವುದು ಕಂಡುಬರುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಂಟ'ಎಂದರೆ ಸಂಬಂಧಿಕ, ಆತಿಥಿ ಎಂಬರ್ಥದಲ್ಲಿ ಬಳಸಲಾಗುತ್ತದೆ, ಧಾರವಾಡ ಕನ್ನಡದಲ್ಲಿ 'ನೆಂಟ' ನಂದರೆ ಗಂಡನಿದ್ದೂ ಹೆಂಡತಿಯಾದವಳು ಪರಪರುಷನನ್ನು ಇಟ್ಟುಕೊಂಡರೆ ಅವನಿಗೆ ಈ `ನೆಂಟ' ಪದ ಬಳಸಲಾಗುತ್ತದೆ. ಈ ರೀತಿ ಅನರ್ಥಕ್ಕೆಡೆಯಾಗುವುದೂ ಉಂಟು,

ಹೊಸ ಪದಗಳ ಸೇರ್ಪಡೆ, ಹಳೆ ಪದಗಳ ಕಣ್ಮರೆಯಾಗುವುದೂ ಅರ್ಥ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.

ವಿವಿಧ ಪ್ರಕಾರಗಳಲ್ಲಿ ಮಾತನಾಡುವಾಗಲೂ ಆರ್ಥ ವ್ಯತ್ಯಾಸಗಳಾಗುತ್ತವೆ. ಅಲಂಕಾರಿಕವಾಗಿ ಮಾತನಾಡುವಾಗ , ಗಂಭೀರವಾಗಿ ಮಾತನಾಡುವಾಗ, ವ್ಯಂಗವಾಗಿ ಭಾಷೆ ಬಳಸುವವರಿಗೆ, ವಿನಯದಿಂದ ಮಾತನಾಡುವಾಗ, ಸೌಮ್ಯವಾಗಿ ಮಾತನಾಡುವಾಗ, ತಪ್ಪು ತಿಳುವಳಿಕೆಯಿಂದ ಮಾತನಾಡುವಾಗ, ಹೀಗೆ ಅನೇಕ ಮಾತಿನ ಸಂದರ್ಭಗಳಲ್ಲಿ ಅರ್ಥ ವ್ಯತ್ಯಾಸಗಳಾಗುತ್ತವೆ.

3) ವ್ಯಾಕರಣ ವ್ಯತ್ಯಾಸ : ವೈಜ್ಞಾನಿಕವಾಗಿ ಭಾಷೆ ಬಳಸುವ ನಿಯಮಗಳನ್ನು ವ್ಯಾಕರಣವು ರೂಪಿಸುತ್ತದೆ . ಭಾಷೆಯನ್ನು ನಮ್ಮ ಮನಸ್ಸಿಗೆ ಕಂಡಂತೆ ಬಳಸಲು ಬರುವುದಿಲ್ಲ. ಆದರೆ ವ್ಯಕ್ತಿ ತನ್ನ ಭಾಷೆಯಲ್ಲಿ ಅಂದರೆ ಮಾತೃ ಭಾಷೆಯಲ್ಲಿ ಮಾತನಾಡು ವಾಗ ವ್ಯಾಕರಣ ವ್ಯತ್ಯಾಸವಾಗುವುದುಂಟು. ಕನ್ನಡದಲ್ಲಿ ಮನೆಭಾಷೆಯಲ್ಲಿ 'ಅಮ್ಮ' ನನ್ನು ಸಂಬೋಧಿಸುವಾಗ ಉತ್ತರ ಕನ್ನಡದಲ್ಲಿ 'ಅದು ಇದು 'ಎಂದು ನಪುಂಸಕ ಲಿಂಗ ಬಳಸಲಾಗುತ್ತದೆ. ಅಪ್ಪ ತನ್ನ ಮಗನಿಗೆ ಅಮ್ಮನನ್ನು ಕುರಿತು ಕೇಳುವಾಗ 'ಅದು (ಅಮ್ಮ) ಎಲ್ಲಿ ಹೋಯಿತು?  'ಎಂದು ನಪುಂಸಕಲಿಂಗ ಬಳಸುತ್ತಾನೆ. ಇದು ಆತ್ಮೀಯ ಭಾಷೆ ಎಂದುಕೊಳ್ಳುತ್ತೇವೆ.ಇದು ಭಾಷೆಯಲ್ಲಿನ ವ್ಯಾಕರಣ ವ್ಯತ್ಯಾಸ , ಸಂಸ್ಕೃತದಲ್ಲಿ ಇಬ್ಬರು ವ್ಯಕ್ತಿಗಳು , ಎರಡು ವಸ್ತುಗಳ ಕುರಿತು ಮಾತನಾಡುವಾಗ ದ್ವಿವಚನ ಬಳಸಬೇಕಾಗುತ್ತದೆ. ಶುದ್ಧ ಸಂಸ್ಕೃತದಲ್ಲಿ ಈ ನಿಯಮ ತಪ್ಪುವಂತಿಲ್ಲದಿದ್ದರೂ ಸರಳ ಸಂಸ್ಕೃತ ಸಂಭಾಷಣೆ ಯಲ್ಲಿ ದ್ವಿವಚನದ ಬದಲು ಬಹುವಚನವನ್ನೇ ಬಳಸಲಾಗುತ್ತದೆ.

ಇನ್ನು ಬರವಣಿಗೆಯಲ್ಲಿಯೂ ವ್ಯಾಕರಣಬದ್ಧತೆಯಲ್ಲಿ ವ್ಯತ್ಯಾಸಗಳಾಗುವುದುಂಟು. ಕನ್ನಡದಲ್ಲಿ ಬರವಣಿಗೆಯಲ್ಲಿ ಅನುನಾಸಿಕಗಳ ಬದಲು ಅನುಸ್ವಾರ ಬಳಸುವುದು ರೂಢಿಯಲ್ಲಿ ಇತ್ತೀಚಿಗೆ ಬಂದಿದೆ. 30-40 ವರ್ಷಗಳ ಹಿಂದಿನ ಕನ್ನಡ ಪುಸ್ತಕಗಳಲ್ಲಿ ನೋಡಿದಾಗ ಇದು ವೇದ್ಯವಾಗುತ್ತದೆ - ಉದಾ : ಹೆಣ್ಣತಿ ' ಬರೆಯುವ ಬದಲು 'ಹೆಂಡತಿ' ಎಂದು ಬರೆಯುತ್ತೇವೆ 'ಅಬಳ' ಎಂಬುದನ್ನು ಅಂಗಳ 'ಬರೆಯುತೇವೆ. ಹೀಗೆ ಬಳಕೆಗೆ ಬಂದರೂ ಉಚ್ಚಾರ ಕ್ರಮದಲ್ಲಿ ಮಾತ್ರ ಅನುನಾಸಿಕಗಳನ್ನೇ ಬಳಸುತ್ತೇವೆ. ಉಚ್ಚಾರದಲ್ಲಿ ಅನುಸ್ವಾರ ಬಳಸಿದರೆ ಹೊಸ ಶಬ್ದ ಉತ್ಪತ್ತಿಯಾಗುವಂತಿದೆ.

ಭಾಷೆಯ ಹಳೆಯ ವ್ಯಾಕರಣ ಬದಲಾಗಿ ಹೊಸದಾಗಿ ವ್ಯತ್ಯಾಸವಾಗುವುದೂ ಇದೆ. ಉದಾಹರಣೆಗೆ: ಹಳಗನ್ನಡದ ಕ್ರಿಯಾ ಪ್ರಕೃತಿಗಳು ಹೊಸಗನ್ನಡದಲ್ಲಿ ಬದಲಾವಣೆಯಾಗಿವೆ ಇರ್ ಇರು, ದಾಂಟು ದಾಟು, ತಿನ್ ತಿನ್ನು, ಉಗುಲ್ ಉಗುಳು, ಕಾ  ಕಾಯು ಇತ್ಯಾದಿ. ಹೀಗೆ ಹಳಗನ್ನಡದ ಸರ್ವನಾಮಗಳು, ಪ್ರಶ್ನಾರ್ಥಕ ಗಳು, ಸಂಬಂಧಾರ್ಥ ಸರ್ವನಾಮಗಳು, ವಿಭಕ್ತಿ ಪ್ರತ್ಯಯಗಳು, ಕ್ರಿಯಾಪದಗಳು, ಸಂಖ್ಯಾವಾಚಕಗಳು, ಈ ಮುಂತಾದವುಗಳು ಹೊಸಗನ್ನಡದಲ್ಲಿ ಬದಲಾವಣೆ ಯಾಗಿರುವುದು ಕಂಡುಬರುತ್ತದೆ. ಹೊಸಗನ್ನಡದಲ್ಲಿ ಇತರ ಭಾಷಾ ವ್ಯಾಕರಣ (ಸಂಸ್ಕೃತ) , ಶಬ್ದಗಳ ಮಹಾಪೂರ ಹರಿದು ಬಂದಿರುವುದು ಹಳಗನ್ನಡಕ್ಕೂ, ಹೊಸ ಗನ್ನಡಕ್ಕೂ ತುಂಬಾ ವ್ಯತ್ಯಾಸಗಳಾಗಲು ಕಾರಣವೆಂದು ಹೇಳಬಹುದು . ಅಲ್ಲದೇ ಕಾಲಾನುಕ್ರಮದಲ್ಲಿ ಭಾಷಾವ್ಯತ್ಯಾಸ ಸಹಜ ಪ್ರಕ್ರಿಯೆಯಾಗಿದೆ .

ಭಾಷಾ ವ್ಯತ್ಯಾಸಕ್ಕೆ ಕಾರಣಗಳು :

ಕಾರಣರಹಿತವಾಗಿ ಒಮ್ಮೇಲೆ ಶಬ್ದಗಳು ಹುಟ್ಟುವುದಿಲ್ಲ ಮತ್ತು ಬಳಕೆ ಯಾಗುವುದಿಲ್ಲ . ಭಾಷಾ ವ್ಯತ್ಯಾಸಕ್ಕೆ ಹಲವಾರು ಕಾರಣಗಳು ಇರುತ್ತವೆ. ಯಾವುದೋ ಒಂದು ಕಾರಣದಿಂದ ಭಾಷಾ ವ್ಯತ್ಯಾಸ ಉಂಟಾಗುತ್ತದೆ ಎನ್ನುವುದು ತಪ್ಪಾಗುತ್ತದೆ ಎಂಬುದಾಗಿ ಇತ್ತೀಚಿನ ಭಾಷೆಯ ಬಗೆಗಿನ ಅಧ್ಯಯನಗಳು ಹೇಳುತ್ತವೆ.

ಮುಖ್ಯವಾಗಿ ಎರಡು ಕಾರಣಗಳು ಹಾಗೂ ಉಪಕಾರಣಗಳು ಭಾಷಾವ್ಯತ್ಯಾಸಕ್ಕೆ ಕಾರಣವಾಗುತ್ತವೆ ಎಂಬುದಾಗಿ ಅಧ್ಯಯನಗಳು ಪ್ರತಿಪಾದಿಸುತ್ತವೆ.

1) ಸಮಾಜದ ಸ್ವರೂಪಕ್ಕನುಗುಣವಾಗಿ ಭಾಷಾ ವ್ಯತ್ಯಾಸ .

2) ಭಾಷೆಯ ರಚನೆಯ ಸ್ವರೂಪಕ್ಕನುಗುಣವಾಗಿ ಭಾಷಾ ವ್ಯತ್ಯಾಸ.

ಸಮಾಜದ ಸ್ವರೂಪಕ್ಕನುಗುಣವಾಗಿ ಉಂಟಾಗುವ ವ್ಯತ್ಯಾಸಗಳು:

ಅ) ಭೌಗೋಳಿಕ ಅಂಶಗಳು : ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಾಗ ಒಂದು ಪ್ರದೇಶದ ಭಾಷೆ ಇನ್ನೊಂದು ಪ್ರದೇಶದ ಮೇಲೆ ಪ್ರಭಾವ ಬೀರುತ್ತದೆ. ಈ ಎರಡು. ಗುಂಪುಗಳ ಭಾಷಾಸಂವಹನ ಶಬ್ದ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಆಗ ಎರಡೂ ಭಾಷೆಗಳಲ್ಲಿಯೂ ಭಾಷಾ ವ್ಯತ್ಯಾಸಗಳಾಗುತ್ತವೆ. ವ್ಯಕ್ತಿಗಳು ಪರಸ್ಪರ ಸಂಪರ್ಕಕ್ಕೆ ಬಂದಾಗ ಭಾಷೆಯು ಒಂದರ ಜೊತೆ ಇನ್ನೊಂದು ಬೆರೆಯುವುದು ಸಹಜ ಪ್ರಕ್ರಿಯೆ. ಒಂದು ಭಾಷೆಯ ಸ್ವರಭಾರ/ಧ್ವನಿ, ವ್ಯಾಕರಣ, ಶಬ್ದ ಪ್ರಯೋಗ ಇವೆಲ್ಲ ಒಂದರ ಮೇಲೆ ಇನ್ನೊಂದು ಪ್ರಭಾವ ಬೀರುತ್ತವೆ. ಇಂದಿನ ಜಾಗತೀಕರಣದ ಯುಗದಲ್ಲಿ ಇಡೀ ಜಗತ್ತೇ ಒಂದಾಗಿರುವುದರಿಂದ ಜನಸಂಪರ್ಕ ಅತ್ಯಂತ ಸುಲಭ ಸಾಧ್ಯವಾಗಿರುವುದರಿಂದ ಭಾಷೆಗಳ ಪ್ರಭಾವವೂ ಒಂದರ ಮೇಲೆ ಇನ್ನೊಂದು ಸುಲಭವಾಗಿ ಆಗುವಂತಾಗಿದೆ.

2) ಹೊಸ ಆವಿಷ್ಕಾರ, ಆಲೋಚನೆಗಳ ಪ್ರಭಾವ : ಹೊಸ ಹೊಸ ಆಲೋಚನೆಗಳೊಂದಿಗೆ ಹೊಸ ಹೊಸ ಶಬ್ದಗಳು ಹುಟ್ಟುತ್ತಲೇ ಇರುತ್ತವೆ. ಅಂತೆಯೆ ಹೊಸ ಹೊಸ ಆವಿಷ್ಕಾರಗಳಾದಂತೆ ಆ ವಸ್ತುಗಳಿಗೆ ತಕ್ಕಂತೆ ಹೊಸ ಹೊಸ ಶಬ್ದಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ : ಕನ್ನಡದಲ್ಲಿ ಟಿ.ವಿ. ಕಂಪ್ಯೂಟರ್‌ಗಳ ಆವಿಷ್ಕಾರವಾದ ಬಳಿಕ ಅವುಗಳ ಸ್ವರೂಪಕ್ಕನುಗುಣವಾಗಿ ದೂರದರ್ಶನ, ಗಣಕಯಂತ್ರ ಎಂಬ ಪದಗಳು ಹುಟ್ಟಿ ಕೊಂಡವು. ಅದೇ ರೀತಿ ಅಣು ಸಮರ, ಸತ್ಯಾಗ್ರಹ, ಶೀತಲಯುದ್ಧ ಇತ್ಯಾದಿಗಳೆಲ್ಲ ಹೊಸ ಪದಗಳಾಗಿ ಭಾಷೆಯಲ್ಲಿ ಸೇರಿ ಹಳೆಯದಾಗಿವೆ. ಅದೇ ರೀತಿ ಹೊಸ ಆಲೋಚನೆಗಳಂತೆ ಹಳೆ ಆಲೋಚನೆಗಳು , ಹಳೆ ವಸ್ತುಗಳು ಮರೆಯಾಗುವಂತೆ ಅವುಗಳಿಗೆ ಇರುವ ಪದಗಳೂ ಮರೆಯಾಗುತ್ತವೆ . ಉದಾಹರಣೆಗೆ : ಕನ್ನಡದಲ್ಲಿ ಕಾಸು, ಆಣೆ, ಇತ್ಯಾದಿ.

 3) ಅಸಮರ್ಪಕ ಕಲಿಕೆ : ಅಸಮರ್ಪಕ ಕಲಿಕೆ ಎರಡು ರೀತಿಯಲ್ಲಿ ಉಂಟಾಗುತದೆ. ಮೊದಲನೆಯದಾಗಿ ಮಕ್ಕಳು ಭಾಷೆಯನ್ನು ಕಲಿಯುವಾಗ ಹಿರಿಯರ ಭಾಷೆಯನ್ನು ಸರಿಯಾಗಿ ಅನುಸರಿಸದೇ ಹೊಸ ರೂಪದಲ್ಲಿ ಭಾಷೆಯಲ್ಲಿ ಶಬ್ದಗಳನ್ನು ಬಳಸಿ ಅವೇ ಮುಂದೆ ಭಾಷೆಯಲ್ಲಿ ಸೇರ್ಪಡೆಯಾಗಿ ಭಾಷಾವ್ಯತ್ಯಾಸಕ್ಕೆ ಕಾರಣವಾಗುತ್ತವೆ. ಇನ್ನೊಂದು ರೀತಿಯೆಂದರೆ ಒಂದು ಜನಸಮೂಹ ಇನ್ನೊಂದು ಭಾಷೆಯನ್ನು ಸರಿಯಾಗಿ ಕಲಿಯದಿದ್ದಾಗ ಅವರು ಬಳಸುವ ಶಬ್ದಗಳೇ ಮುಂದೆ ಭಾಷೆಯಲ್ಲಿ ಕೂಡಿ ಭಾಷಾವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ: ಬೆಂಗಳೂರಿನಲ್ಲಿ ವಾಸಿಸುವ ತಮಿಳರು' ನಾಳಿನ್ನಣ್ಣಕ್ಕಿ ಎಂಬ ಪದವನ್ನು 'ನಾಡಿದ್ದು' ಹೇಳುವುದಕ್ಕೆ ಬಳಸುತ್ತಾರೆ. ಆದರೆ 'ನಾಡಿದ್ದು' ಎನ್ನಲು ತಮಿಳಿನಲ್ಲಿ 'ನಾಳ್ಕೊಮರುನಾಳ್' ಎಂಬ ಪದವಿದೆ . ಕನ್ನಡದ ' ನಾಡಿದ್ದು ' ಎಂಬ ಪದದ ಪ್ರಭಾವದಿಂದ 'ನಾಳಿನ್ನಣ್ಣಕ್ಕಿ' ಬಳಕೆಗೆ ಬಂದಿರಬೇಕು .

4) ಸಾಮಾಜಿಕ ಪ್ರತಿಷ್ಠೆ : ಸಮಾಜದಲ್ಲಿ ಜನರು ತಮ್ಮ ಆರಾಧ್ಯ ವ್ಯಕ್ತಿಗಳನ್ನು ಅನುಸರಿಸಲು ಪ್ರಯತ್ನಿಸುವುದು ಸಹಜವಾಗಿದೆ. ಉದಾಹರಣೆಗೆ: ಸಿನಿಮಾನಟರು, ರಾಜಕೀಯನಾಯಕರು, ಸಂಗೀತಗಾರರು, ಕವಿಗಳು, ನಾಟಕಕಾರರು, ಕ್ರೀಡಾಪಟುಗಳು, ಮಹಾ ಪುರುಷರು, ಮೊದಲಾದವರು. ಇವರ ನಡೆ-ನುಡಿ, ಸ್ವರಭಾವ ಅನುಸರಿಸಿ ತಾವೂ ಕೂಡ ಸಾಮಾಜಿಕವಾಗಿ ಪ್ರತಿಷ್ಠಿತರೆಂಬಂತೆ ಭಾವಿಸುತ್ತಾರೆ. ಇಷ್ಟೇ ಅಲ್ಲದೇ ಕೆಳವರ್ಗದ ಜನ ಮೇಲುವರ್ಗದ ಭಾಷೆಯನ್ನು ಅನುಕರಿಸುವುದು, ಹಳ್ಳಿಗರು, ಪಟ್ಟಣದವರ ಭಾಷೆಯನ್ನು ಅನುಕರಿಸುವುದು ಇವು ಕೂಡ ಸಾಮಾಜಿಕ ಪ್ರತಿಷ್ಠೆಯ ಭಾವನೆಯಿಂದಲೇ ಬಂದಿದ್ದೇ ಆಗಿದೆ. ಉದಾಹರಣೆಗೆ: ಕನ್ನಡದಲ್ಲಿ ಹಳ್ಳಿಗರು ವಸಿ ಇಕ್ಕು, ಏಟು ಈ ಪದಗಳನ್ನು ಬಳಸುತ್ತಾರೆ, ಈ ಪದಗಳಿಗೆ ಪಟ್ಟಣಿಗರು ಸ್ವಲ್ಪ ಇಡು ಎಷ್ಟು ಎಂಬ ಪದಗಳನ್ನು ಬಳಸುತ್ತಾರೆ. ಹೀಗೆ ಈ ಪದಗಳು ಹಳ್ಳಿಗಳಿಂದ ಅವರ ಭಾಷೆಯಲ್ಲಿ ಮಿಳಿತವಾಗಿ ಹೊಸರೂಪದ ಭಾಷೆ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಪ್ರತಿಷ್ಠೆ ಇನ್ನೊಂದು ರೀತಿಯಲ್ಲಿ ಭಾಷಾ ವ್ಯತ್ಯಾಸ ಆಗದಂತೆ ತಡೆಯುವುದೂ ಇದೆ. ಭಾಷಾಭಿಮಾನದಿಂದ ತಮ್ಮ ಭಾಷೆಗೆ ಚ್ಯುತಿ ಬರದಂತೆ ಹಳ್ಳಿಗರು, ಪಟ್ಟಣಕ್ಕೆ ಹೋದರೂ ತಮ್ಮ ಶುದ್ಧ ಭಾಷೆ ಮಾತನಾಡುವುದುಂಟು. ಈ ಕಾರಣದಿಂದ ಉಪಭಾಷೆಗಳು ಉಳಿದುಕೊಂಡು ಬಂದಿವೆ ಎಂದು ಹೇಳಬಹುದು. ಹೀಗೆ ಸಾಮಾಜಿಕ ಪ್ರತಿಷ್ಠೆ ಭಾಷಾ ವ್ಯತ್ಯಾಸಕ್ಕೆ ಕಾರಣ ವಾಗುತ್ತದೆಂಬುದನ್ನು ಸಾಮೂಹಿಕ ಭಾಷಾ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗೆಯೇ ಭಾಷೆಯ ಸ್ವರೂಪದ ಆಧಾರದ ಮೇಲೆಯೂ ಭಾಷಾ ವ್ಯತ್ಯಾಸಗಳಾಗುತ್ತವೆ.

ಭಾಷೆಯ ರಚನೆಯ ಸ್ವರೂಪಕ್ಕನುಗುಣವಾಗಿ ಭಾಷಾ ವ್ಯತ್ಯಾಸ :

1) ಉಚ್ಚಾರಣೆಯ ಸೌಲಭ್ಯ : ಭಾಷೆಯ ಮಾತುಗಾರಿಕೆಯಲ್ಲಿ ವ್ಯಕ್ತಿಗಳು ಉಚ್ಚಾರಣೆಯ ಸೌಲಭ್ಯಕ್ಕಾಗಿ ಭಾಷೆಯನ್ನು ಎಷ್ಟು ಮೊಟಕುಗೊಳಿಸಿ ಮಾತನಾಡಲು ಸಾಧ್ಯವೋ ಅಷ್ಟು ಮೊಟಕುಗೊಳಿಸಿ ಮಾತನಾಡಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ: ಬರುತ್ತೇನೆ ಪದವು ಬೇರೆ ಬೇರೆ ಕನ್ನಡದ ಉಪಭಾಷೆಗಳಲ್ಲಿ ಬರ್ತೆನೆ, ಬರ್ತಿನಿ, ಬತ್ತಿ, ಬರಲಾ, ಎಂಬುದಾಗಿ ಬಳಸಲಾಗುತ್ತದೆ. ಮಲಗಿಕೊ ಪದ 'ಮ' ಎಂದಾಗಿದೆ. ಕೊಟ್ಟಿದ್ದೀರಾ? ಎಂದು ಕೇಳುವುದಕ್ಕೆ ಕೊಟ್ಟಿ? ಎಂದು ಬಳಸುತ್ತಾರೆ ಹೀಗೆ ಧ್ವನಿಗಳು, ಧ್ವನಿ ರಚನೆಗಳು ಕ್ರಮೇಣ ಸರಳವಾಗುತ್ತಾ ಭಾಷೆಯಲ್ಲಿ ವ್ಯತ್ಯಾಸವಾಗಲು ಕಾರಣವಾಗುತ್ತವೆ.

2) ಸಾದೃಶ್ಯ : ಭಾಷೆಯನ್ನು ಬಳಸುವಾಗ ವ್ಯಾಕರಣ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಿಯಮಗಳನ್ನು ಬಿಟ್ಟು ಮಾತನಾಡುತ್ತ ಆದು ಹೊಸ ಪದಗಳ ಹುಟ್ಟಿಗೆ ಕಾರಣವಾಗುತ್ತದೆ. ಉದಾಹರಣೆ: ಇಂಗ್ಲಿಷಿನ book ಎಂಬ ಪದದ ಬಹುವಚನ ರೂಪ 'beek' ಎಂದೂ, cow ಎಂಬ ಪದದ ಬಹುವಚನ ರೂಪ 'kine' ಎಂದೂ ಆಗಬೇಕು. ಆದರೆ ಇಂಗ್ಲಿಷ್ ಭಾಷೆಯಲ್ಲಿ ಈ ಬಹುವಚನ ರೂಪಗಳನ್ನು ಉಳಿದ ಪದಗಳಿಗೆ (ಸಾಮಾನ್ಯವಾಗಿ) ಇರುವಂತೆ 's' ಬಳಸಿ 'books ಹಾಗೂ 'cows' ಎಂದು ಬಳಸಲಾಗುತ್ತಿದೆ. ಇದು ಈಗ ಇಂಗ್ಲಿಷಿನ ಪದಗಳಲ್ಲಿ ಬೆರೆತು ಹೋಗಿದೆ.

ಹೀಗೆ ಭಾಷಾ ವ್ಯತ್ಯಾಸಗಳಾಗಲು ಸಾಮಾಜಿಕವಾಗಿ, ಭಾಷೆಯ ಸ್ವರೂಪಕ್ಕನು ಗುಣವಾಗಿ ವ್ಯತ್ಯಾಸಗಳಾಗುತ್ತವೆ.

 

Comments

Popular posts from this blog

ಭಾಷೆಯ ವಿವಿಧ ಘಟಕಾಂಶಗಳು

UDP Language syllabus in Kannada

ಭಾಷಾ ಅನನ್ಯತೆ ( Language Identity )