"ಭಾಷೆ ಎಂದರೇನು ?

 

 ಭಾಷೆ - ಅರ್ಥ ಮತ್ತು ಪರಿಕಲ್ಪನೆ

( Language - Meaning and Concept )

"ಭಾಷೆ ಎಂದರೇನು ?

ಸರಳವಾಗಿ ಹೇಳುವುದಾದರೆ ಭಾಷೆ ಎಂದರೆ. ನಮ್ಮ ಮನಸ್ಸಿನ ಭಾವನೆಗಳನ್ನು ಇತರರೊಡನೆ ಹಂಚಿಕೊಳ್ಳಲು ಬಳಸುವ ಕ್ರಮಬದ್ದ ಪದ ಶಬ್ದ ಪ್ರಯೋಗವೆ ಭಾಷೆ.

ಸಾವಿರಾರು ವರ್ಷಗಳ ಹಿಂದೆ ಧೀಮಂತನಾದ ಮಾನವನು ತನ್ನ ಸಾಮಾಜಿಕ ಸಂಪರ್ಕಕ್ಕಾಗಿ ' ಭಾಷೆ'ಯೆಂಬ ಅಮೂಲ್ಯ ಸಂಪತ್ತನ್ನು ಕಂಡುಕೊಂಡನು . ಇದು ಮಾನವನ ಜೀವನದ ಜೀವನಾಡಿಯಾಗಿ ಜನಜೀವನದಲ್ಲಿ ಪ್ರವಹಿಸುತ್ತ ಬಂದಿತು . ಇದರಿಂದ ' ಭಾಷೆ'ಯೆಂಬ ಅತ್ಯಮೂಲ್ಯ ಉಜ್ವಲ ಬೆಳಕು ಮಾನವನನ್ನು ಇತರ ಪ್ರಾಣಿಗಳಿಂದ ಬೇರ್ಪಡಿಸಿ ಅವನಿಗೆ ಬುದ್ಧಿಜೀವಿಯ ಸ್ಥಾನಮಾನಕ್ಕೇರಿಸಿದೆ , ಅಲ್ಲದೇ ಮಾನವನ ಮುಂದಿನ ಎಲ್ಲಾ ಅದ್ಭುತ ಸಾಧನೆಗಳಿಗೆ ಮೂಲಾಧಾರವಾಗಿದೆ . ಮಾನವನ ಭಾವನಾ ಪೋಷಣೆಗೆ ಭಾವನಾ ವರ್ಗಾವಣೆಗೆ ಮಾಧ್ಯಮವಾಗಿರುವ ಭಾಷೆ ಮಾನವ ಜಗತ್ತಿನ ಪ್ರಗತಿಯ ಮೂಲಾಧಾರವಾಗಿದೆ , ಮಾನವ ಜೀವನದ ಬೆಳಕಾಗಿದೆ.

 “ ಇದಮಂಧತಮಃ ಕೃತ್ಸ ಜಾಯೇತ್ ಭುವನತ್ರಯಂ ಯದಿ ಶಬ್ದಾಹ್ವಯಂ ಜ್ಯೋತಿರಾಸಂಸಾರಂ ನ ದೀಪ್ಯತೆ”                                                 ಪ್ರಾಚೀನ ಸಂಸ್ಕೃತ ಕವಿ ದಂಡಿ .

ಭಾಷೆಯೆಂಬ ಬೆಳಕು ಇಲ್ಲದಿದ್ದರೆ ಇಡೀ ಜಗತ್ತೇ ಕತ್ತಲೆಯಲ್ಲಿ ಮುಳುಗಿ ಹೋಗುತ್ತಿತ್ತು''.

ಭಾಷೆ ಒಂದು ಸ್ವೀಕೃತ ಅಥವಾ ಯಾದೃಚ್ಛಿಕ ಧ್ವನಿ ಸಂಕೇತಗಳ ವ್ಯವಸ್ಥೆ ಎಂಬುದು ಅನೇಕ ಭಾಷಾ ವಿಜ್ಞಾನಿಗಳ ವ್ಯಾಖ್ಯಾನಗಳನ್ನು ಗಮನಿಸಿದಾಗ ತಿಳಿದು ಬರುವ ಅಂಶವಾಗಿದೆ . ಅಂದರೆ ಭಾಷೆಯಲ್ಲಿ ನಾವು ಬಳಸುವ ಧ್ವನಿಗಳು ಸಂಕೇತಾತ್ಮಕ ವಾಗಿರುತ್ತವೆ . ಇಂತಹ ಧ್ವನಿಗಳು ಸೇರಿ ಶಬ್ದಗಳಾಗುತ್ತವೆ . ಈ ಶಬ್ದಗಳು ಮತ್ತು ಅವು ಪ್ರತಿನಿಧಿಸುವ ಅರ್ಥಗಳಿಗೆ ಯಾವುದೇ ಆನುವಂಶಿಕ ಸಂಬಂಧವಿರುವುದಿಲ್ಲ . ಇಲ್ಲಿ ಶಬ್ದಗಳು ಕಾಲ , ದೇಶ , ಪರಿಸರ , ಸಂಸ್ಕೃತಿಗಳಿಂದ ಅರ್ಥವನ್ನು ಪಡೆದುಕೊಳ್ಳುತ್ತವೆ . ಒಂದು ಶಬ್ದಕ್ಕೆ ಒಂದು ಅರ್ಥ ರೂಢಿಗತವಾಗಿ ಪ್ರಾಪ್ತವಾಗುತ್ತದೆ . ಒಂದು ವಸ್ತು - ವನ್ನಾಗಲಿ , ವಿಚಾರವನ್ನಾಗಲೀ ಅಥವಾ , ಭಾವನೆಯನ್ನಾಗಲೀ ಇದೇ ರೀತಿಯ ಧ್ವನಿ ಸಂಕೇತದಿಂದ ಗುರುತಿಸಬೇಕೆಂಬ ಸಾರ್ವತ್ರಿಕ ನಿಯಮವೇನೂ ಇಲ್ಲ . ಅವು ಒಂದು ಸಮೂಹದ , ಭಾಷಾವಲಯದ ಜನರ ಇಚ್ಛೆಯ ಪ್ರಕಾರ ಸ್ವೀಕೃತವಾಗಿರುತ್ತವೆ 

' ಭಾಷಾ ' ಎಂಬ ಶಬ್ದವು ಮೂಲ ಸಂಸ್ಕೃತ ಪದವಾಗಿದ್ದು ' ಭಾಷೆ ' ಎಂಬ ಧಾತುವಿನಿಂದ ಹುಟ್ಟಿದೆ . ' ಭಾಷ್ ' ಎಂಬ ಶಬ್ದ ಮಾತನಾಡು ' ಎಂಬ ಅರ್ಥವನ್ನು ಹೊಂದಿದೆ . ಆದ್ದರಿಂದ ಭಾಷೆ ಮಾತನಾಡುವ ಕ್ರಿಯೆಯನ್ನು ಸೂಚಿಸುತ್ತದೆ . ಇಂಗ್ಲಿಷಿನ Language ಎಂಬ ಪದವು ಲ್ಯಾಟಿನ್ ಭಾಷೆಯ Lingva  ಎಂಬ ಧಾತುವಿನಿಂದ ಬಂದಿದೆ . ಲಿಂಗ್ವ ಎಂದರೆ ನಾಲಿಗೆ ನುಡಿದದ್ದು , ( Spoken word ) ಅಂದರೆ ನಾಲಿಗೆ ಒಂದು ವ್ಯವಸ್ಥಿತ ಸಂಕೇತಗಳ ಮೂಲಕ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತದೆ .  

ಭಾಷೆಯು ಎರಡು ರೂಪಗಳನ್ನು ಪಡಿದಿದೆ . ಒಂದು ಮೂರ್ತ ರೂಪ , ಇನ್ನೊಂದು ಅಮೂರ್ತ ರೂಪ . ಮೂರ್ತ ರೂಪ ಬರವಣಿಗೆ , ಅಮೂರ್ತ ರೂಪ ಮಾತುಗಾರಿಕೆ . ಇವೆರಡೂ ಮಾನವನ ಜೀವನವನ್ನು ಬೆಳಗುವ ಜ್ಯೋತಿಗಳಾಗಿವೆ . ಭಾಷೆ ವಿಚಾರ ವಾಹಕವಾಗಿ , ಭಾವನೆಗಳ ಪೋಷಕವಾಗಿ , ಸಂವಹನ ಮಾಧ್ಯಮ ವಾಗಿ , ವಿಚಾರ ಪ್ರಚೋದಕವಾಗಿ , ಸಾಮಾಜಿಕ ಸಂಪರ್ಕಸಾಧನವಾಗಿ ಮಹತ್ವದ ಪಾತ್ರವಹಿಸುತ್ತದೆ.

ಅನೇಕ ಭಾಷಾವಿಜ್ಞಾನಿಗಳು ಭಾಷೆಯ ಕುರಿತು ವಿಶ್ಲೇಷಿಸಿ ವ್ಯಾಖ್ಯೆಗಳನ್ನು ನೀಡಿದ್ದಾರೆ.

ಎಬ್ಬಿಂಗ್ ಹಾಸ್ ( Ebbinghaus ) : “ ಯಾವಾಗ ಬೇಕಾದರೂ ಸ್ವಪ್ರೇರಿತ ವಾಗಿ ಉಚ್ಚರಿಸಬಹುದಾದ ಸಾಂಪ್ರದಾಯಿಕ ಸಂಕೇತಗಳ ವ್ಯವಸ್ಥೆಯೇ ಭಾಷೆ ”

* ಫರ್ಡಿನಾಂಡ್ ಡಿ . ಸಸೂರ್ : “ ಮನುಷ್ಯನ ಅಭಿಪ್ರಾಯಗಳನ್ನು ವ್ಯಕ್ತ ಗೊಳಿಸುವ ಧ್ವನಿಸಂಕೇತಗಳ ಒಂದು ವ್ಯವಸ್ಥೆಯೇ ಭಾಷೆ ”

ಬ್ಲಾಕ್ ಮತ್ತು ಟೈಗರ್ ( " Block and Trager ) : “ Language is a system of arbitrary vocal symbols by Means of which a so cial group co - operates ” •

 ( Sturtevant ) : “ Language is a system of arbitrary vocal symbols by which Members of the society act and react ”

ಈ ಭಾಷೆಯನ್ನು ವ್ಯಾಖ್ಯಾನಿಸುವ ಪ್ರಯತ್ನವನ್ನು ಭಾರತೀಯ ಅಲಂಕಾರಿಕರಲ್ಲದೇ ಹಲವು ಪಾಶ್ಚಾತ್ಯರು ಕೂಡ ಮಾಡಿದ್ದರೆ. ಮೊದಲಲ್ಲಿ ಭಾಷೆ ಎನ್ನುವುದು ದೈವದತ್ತವಾದುದು, ನಿಸರ್ಗದತ್ತವಾದುದು ಹಾಗೂ ವಂಶ ವಾಹಿನಿ ಎಂದು ಭಾವಿಸಲಾಗಿತ್ತು. ಆದರೆ ಈಗ ಇದು ಸಾಮಾಜಿಕತೆಯಿಂದ ಹಾಗೂ ಕಲಿಕೆಯಿಂದ ಬರುವಂತಹುದು ಎಂದು ಸಾಬೀತಾಗಿದೆ.

ಮಾರ್ಟಿ ಎಂಬಾತ ಒಂದು ಚಿತ್ತ ಸ್ಥಿತಿಯನ್ನು ಉದ್ದೇಶದಿಂದ ಕೂಡಿದ ಧ್ವನಿಗಳ ಉಚ್ಚಾರದಿಂದ ವ್ಯಕ್ತಪಡಿಸುವುದೇ ಭಾಷೆ ಎನ್ನುತ್ತಾನೆ.

ಎಡ್ವರ್ಡ್ ಸಫೀರ್ ಎಂಬಾತನು ನಮ್ಮ ವಿಚಾರಗಳನ್ನು, ಭಾವನೆಗಳನ್ನು ಹಾಗೂ ಅಪೇಕ್ಷೆಗಳನ್ನು ಸಂವಹನ ಮಾಡಲೆಂದು ಇರುವ ಸ್ವಭಾವ ಸಿದ್ಧವಲ್ಲದ ಹಾಗೂ ಮಾನವನಿಗೆ ಮಾತ್ರ ಸೀಮಿತವಾದ ಸ್ವಪ್ರೇರಿತ ಉಚ್ಚಾರಿತ ಸಂಕೇತಗಳ ವ್ಯವಸ್ಥೆಯೇ ಭಾಷೆ.

ಇದನ್ನೇ ಸ್ಟುರ್ಟ್ ವಾಂಟ್ ಎಂಬಾತನು ಮೇಲಿನ ವ್ಯಾಖ್ಯಾನವನ್ನು ಕ್ರೋಡೀಕರಿಸಿ ಹೀಗೆ ಹೇಳುತ್ತಾನೆ. ಭಾಷೆ ಎನ್ನುವುದು ಯಾದೃಚ್ಚಿಕ್ಕವಾದ ಮೌಖಿಕ ಧ್ವನಿ ಸಂಕೇತಗಳನ್ನು ಹೊಂದಿದ ವ್ಯವಸ್ಥೆಯಾಗಿದ್ಧು, ಸಮಾಜದ ಸದಸ್ಯರ ಕ್ರಿಯೆ ಮತ್ತು ಪ್ರಕ್ರಿಯೆಗಳು ಇದರಿಂದ ಸಾಧ್ಯ್ಯವಾಗಿದೆ ಇವರುಗಳ ಅನುಸಾರ ಭಾಷೆ ಎನ್ನುವುದು ಮಾನವನಿಗೆ ಮಾತ್ರ ಸೀಮಿತ ವಾದ, ಒಬ್ಬ ವ್ಯಕ್ತಿಯು ತನ್ನ ಭಾವನೆ, ಆಸೆ, ವಿಷಯ ಹಾಗೂ ಸಂದರ್ಭವನ್ನು ಮತ್ತೊಬ್ಬರಿಗೆ ಅರ್ಥೈಸಲು ಬಳಸುವ ಸಂಪರ್ಕ ಮತ್ತು ಸಂವಹನ ಸಾಧನ. ಭಾಷೆ ಎನ್ನುವುದು ಯಾಧೃಚ್ಛಿಕ ಧ್ವನಿ ಸಂಕೇತಗಳ ವ್ಯವಸ್ಥೆ, ಇದರಿಂದ ಮಾನವ ಜೀವಿ ಪರಸ್ಪರ ಸಹಕರಿಸುತ್ತದೆ.



 

Comments

Popular posts from this blog

ಭಾಷೆಯ ವಿವಿಧ ಘಟಕಾಂಶಗಳು

UDP Language syllabus in Kannada

ಭಾಷಾ ಅನನ್ಯತೆ ( Language Identity )